ಚಿಕ್ಕಮಗಳೂರು:ಕೊರೋನಾ ಕಾರಣದಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಿಸಿಯೂಟ ತಯಾರಕ ಸಿಬ್ಬಂದಿಗಳಿಗೆ ತಡೆಹಿಡಿಯಲಾಗಿರುವ ಎರಡು ತಿಂಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾಕರ ಫೆಡರೇಷನ್ ತಾಲ್ಲೂಕು ಘಟಕದ ವತಿಯಿಂದ ಅಡುಗೆ ಸಿಬ್ಬಂದಿಗಳು ಹಾಗೂ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಛೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾಕರ ಫೆಡರೇಷನ್ ತಾಲ್ಲೂಕು ಅಧ್ಯಕ್ಷೆ ಇಂದುಮತಿ ಮಾತನಾಡಿ ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಅನುದಾನಿತ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಇಂದಿನ ದಿನಮಾನಕ್ಕೆ ಅತ್ಯಂತ ಕಡಿಮೆ ಇದ್ದು ಜೀವನ ನಿರ್ವಹಣೆ ಕಷ್ಟವಾಗಿದ್ದೂ ಕೂಡಲೇ ವೇತನ ಹೆಚ್ಚಳ ಮಾಡಬೇಕು ಜೊತೆಗೆ ಕೋವಿಡ್ ಕಾರಣದಿಂದಾಗಿ ತಡೆಹಿಡಿಯಲಾಗಿರುವ ಜೂನ್ ಮತ್ತು ಜುಲೈ ಮಾಹೆಯ ವೇತನವನ್ನು ಬಿಡುಗಡೆಗೊಳಿಸುವಂತೆ ಘೋಷಣೆ ಮೂಲಕ ಒತ್ತಾಯಿಸಿದರು.
ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿರುವಂತೆ ರಾಜ್ಯದಲ್ಲೂ ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ನಿಗಧಿಗೊಳಿಸಬೇಕು, ೬೦ ವರ್ಷ ಮೇಲ್ಪಟ್ಟ ಬಿಸಿಯೂಟ ತಯಾಕರನ್ನು ವಯೋ ಕಾರಣದಿಂದಾಗಿ ಕೆಲಸದಿಂದ ವಜಾಗೊಳಿಸದೇ ಕೆಲಸದಿಂದ ಮುಂದುವರಿಸಬೇಕು. ಪ್ರೌಢ ಶಾಲೆಗಳಲ್ಲಿ ಅಡುಗೆ ತಯಾರಿಸಲು ಕಡ್ಡಾಯವಾಗಿ ಇಬ್ಬರು ಅಡುಗೆ ಸಿಬ್ಬಂದಿಗಳು ಇರುವಂತೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರ ಕೆಲಸ ಖಾಯಂಗೊಳಿಸಿ, ಅವರಿಗೆ ಶಾಸನಾತ್ಮಕ ಸವಲತ್ತುಗಳನ್ನು ನೀಡಬೇಕು, ಬಿಸಿಯೂಟ ತಯಾರಿಸಲು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು, ಬಿಸಿಯೂಟ ತಯಾರಕರರಿಗೆ ಪ್ರತಿ ಮಾಹೆಯ ೫ ನೇ ತಾರೀಖಿನೊಳಗೆ ವೇತನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೋವಿಡ್ ಲಾಕ್‌ಡೌನ್ ಪರಿಹಾರವಾಗಿ ಇತರೆ ಅಸಂಘಟಿತ ಕಾರ್ಮಿಕರಿಗೆ ನೀಡಿದಂತೆ ಅಸಂಘಟಿತ ವಲಯಕ್ಕೆ ಸೇರಿದ ಬಿಸಿಯೂಟ ತಯಾರಕರಿಗೆ ೫ ಸಾವಿರ ಆರ್ಥಿಕ ನೆರವು ನೀಡಬೇಕು, ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾಕರ ಫೆಡರೇಷನ್ ಜಿಲ್ಲಾಧ್ಯಕ್ಷ ರಘು, ಜಿಲ್ಲಾ ಕಾರ್ಯದರ್ಶಿ ವಿಜಯ್‌ಕುಮಾರ್, ತಾಲ್ಲೂಕು ಕಾರ್ಯದರ್ಶಿ ಭಾಗ್ಯ ಸೇರಿದಂತೆ ಮತ್ತಿತರರು ಇದ್ದರು.

























Discussion about this post