ಚಿಕ್ಕಮಗಳೂರು: ಕೋವಿಡ್ ಮೂರನೇ ಅಲೆ ಕಾಲಿಡುವ ಮುನ್ನವೇ ಜಿಲ್ಲೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿರುವಾಗಲೇ ಜಿಲ್ಲೆಯಲ್ಲಿ ಪ್ರತಿದಿನ ವರದಿಯಾಗುತ್ತಿರುವ ಒಟ್ಟಾರೆ ಪಾಸಿಟೀವ್ ವರದಿಗಳಲ್ಲಿ ನವಜಾತ ಶಿಶುಗಳೂ ಸೇರಿದಂತೆ ೧೫ ವರ್ಷದೊಳಗಿನ ವಿವಿಧ ವಯೋಮಾನದ ಮಕ್ಕಳು ಇರುವುದು ದಿಗಿಲು ಮೂಡಿಸುತ್ತಿದೆ.
ಆಗಸ್ಟ್ ೧ ರಿಂದ ೫ ರ ವರೆಗೆ ಜಿಲ್ಲೆಯಲ್ಲಿ ಒಟ್ಟು ೩೨೫ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದರೆ, ಅದರಲ್ಲಿ ೩೮ ಪ್ರಕರಣಗಳು ೧೫ ವರ್ಷದ ಒಳಗಿನ ಮಕ್ಕಳಾಗಿದ್ದಾರೆ. ಈ ಪೈಕಿ ೨೧ ಮಕ್ಕಳು ೧೦ ವರ್ಷದೊಳಗಿನವರಾಗಿದ್ದಾರೆ.
ಆಗಸ್ಟ್ ೫ ರಂದು ಒಂದೇ ದಿನ ೧೯ ಮಕ್ಕಳಿಗೆ ಸೊಂಕು ತುಗುಲಿದೆ. ಇದರಲ್ಲಿ ಕೆಲವೇ ದಿನಗಳ ಹಿಂದಷ್ಟೇ ಜನಿಸಿದ ಒಂದು ಮಗುವೂ ಸೇರಿದೆ. ಅದೇ ದಿನ ಸೋಂಕಿಗೊಳಗಾದವರಲ್ಲಿ ೩ ವರ್ಷದ ೨ ಮಕ್ಕಳು, ೨ ವರ್ಷದ ೪ ಮಕ್ಕಳು, ೪ ವರ್ಷದ ೩ ಮಕ್ಕಳೂ ಇವೆ. ಉಳಿದೆಲ್ಲವೂ ೧೦ ಹಾಗೂ ೧೫ ವರ್ಷದೊಳಗಿನ ಮಕ್ಕಳಾಗಿವೆ.
ಆಗಸ್ಟ್ ೧ ರಂದು ಜಿಲ್ಲೆಯಲ್ಲಿ ಒಟ್ಟು ೬೫ ಮಂದಿ ಸೋಂಕಿಗೊಳಗಾಗಿದ್ದರೆ ಆ ಪೈಕಿ ೧೫ ವರ್ಷದೊಳಗಿನ ೧೧ ಮಕ್ಕಳು ಸೇರಿವೆ. ಆಗಸ್ಟ್ ೨ ರಂದು ವರದಿಯಾದ ೩೬ ಪ್ರಕರಣಗಳಲ್ಲಿ ೨ ಮಕ್ಕಳಿವೆ, ಆಗಸ್ಟ್ ೩ ರಂದು ೬೦ ಪ್ರಕರಣ ಪತ್ತೆಯಾಗಿದ್ದು, ೪ ಮಕ್ಕಳು ಸೇರಿವೆ. ಆಗಸ್ಟ್ ೪ ರಂದು ಒಟ್ಟು ೬೭ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ೨ ಮಕ್ಕಳು ಸೇರಿವೆ.
ಜಿಲ್ಲೆಯಲ್ಲಿ ಸರಾಸರಿ ಪಾಸಿಟೀವ್ ದರ ಶೇ.೩ ರ ಆಸುಪಾಸಿನಲ್ಲೇ ವರದಿಯಾಗುತ್ತಿರುವುದು ೩ ನೇ ಅಲೆಗೆ ಎಚ್ಚರಿಕೆ ಗಂಟೆ ಎಂದೇ ಭಾವಿಸಲಾಗುತ್ತಿದೆ. ಕಳೆದ ೫ ದಿನಗಳಲ್ಲಿ ಒಮ್ಮೆ ಮಾತ್ರ ೩೬ ಪ್ರಕರಣ ವರದಿಯಾಗಿದ್ದರೆ ಮೂರು ದಿ ೬೦ ಕ್ಕಿಂತ ಹೆಚ್ಚು ಹಾಗೂ ಒಂದು ದಿನ ೯೭ ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳುತ್ತಿದ್ದರೂ ಸಾರ್ವಜನಿಕರ ಜವಾಬ್ದಾರಿಯೂ ಅಷ್ಟೇ ಇದೆ. ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಿದೆ.

























Discussion about this post