ಚಿಕ್ಕಮಗಳೂರು: ಸರ್ಕಾರದ ಜಮೀನು ಕಬಳಿಸುವ ಉದ್ದೇಶದಿಂದ ನಿರ್ಮಿಸಿದ್ದ ಅಕ್ರಮ ಬೇಲಿಯನ್ನು ಕಂದಾಯ ಇಲಾಖೆಯು ಖುಲ್ಲಾಗೊಳಿಸಿದೆ, ಇದಕ್ಕೆ ಪೋಲೀಸರ ಸಾಥ್ ಕೂಡಾ ಸಿಕ್ಕಿತ್ತು. ಮೂಡಿಗೆರೆ ಸಮೀಪ ಹೆಗ್ಗರವಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಈ ಕುರಿತು ಕಂದಾಯ ಇಲಾಖೆಗೆ ದೂರು ನೀಡಿದ್ದರು.
ಹೆಗ್ಗರವಳ್ಳಿ ಗ್ರಾಮದಲ್ಲಿನ ಮೂವರು ಪ್ರಭಾವಿ ವ್ಯಕ್ತಿಗಳ ಸರ್ವೆ ನಂಬರ್ ೫೦ ರಲ್ಲಿ ಎಂಟು ಎಕರೆ ಸರ್ಕಾರಿ ಜಮೀನಿಗೆ ಬೇಲಿ ನಿರ್ಮಿಸಿ, ಅಕ್ರಮ ಕಾಫಿ ತೋಟ ಮಾಡುತ್ತಿದ್ದರು. ಈಗ ಕಂದಾಯ ಇಲಾಖೆ ಮತ್ತು ಪೋಲೀಸ್ ಇಲಾಖೆಯ ಸಾಥ್ ನೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಸರ್ಕಾರಿ ಜಮೀನು ಖಾಸಗಿ ಶಕ್ತಿಗಳಿಂದ ವಿಮುಕ್ತಗೊಳಿಸಲಾಗಿದೆ.
ಗ್ರಾಮದ ಸುಮಾರು ೮೦ ಮಂದಿ ಅಕ್ರಮ ಬೇಲಿ ಹಾಕಿದ್ದ ದಿನವೇ ತಿರುಗಿ ಬಿದ್ದಿದ್ದರೂ ಜಗ್ಗದೆ ಪಿತೂರಿ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ತಹಸೀಲ್ದಾರರಿಗೆ ದೂರು ನೀಡಲಾಗಿತ್ತು. ಸ್ಥಳೀಯರ ದೂರ ಆದರಿಸಿ ಕಂದಾಯ ಇಲಾಖೆ ಕಾರ್ಯಪ್ರವೃತ್ತರಾಗಿ ಬೇಲಿಗೆ ಅಳವಡಿಸಿದ್ದ ತಂತಿ ವಶಕ್ಕೆ ತೆಗೆದುಕೊಂಡು ಜಮೀನು ಖುಲ್ಲಾಗೊಳಿಸಿದ್ದಾರೆ.
ಸ್ಥಳದಲ್ಲಿ ಗೋಣಿಬೀಡು ಕಂದಾಯ ನಿರೀಕ್ಷಕ ಲಕ್ಷಣ್, ಗ್ರಾಮ ಲೆಕ್ಕಾಧಿಕಾರಿ ಕಂಪನ, ಗೋಣಿಬೀಡು ಪಿಎಸ್ ಐ ಧನಂಜಯ, ಕಂದಾಯ ಇಲಾಖೆ ಸಿಬ್ಬಂದಿ, ಮೀಸಲು ಪಡೆಯ ಪೋಲೀಸರು ಹಾಜರಿದ್ದರು
ಘಟನೆಗೆ ಸಂಬಂಧಿಸಿದಂತೆ ನಿವೃತ್ತ ಸೈನಿಕರಾದ ಮಹೇಶ್, ಕೀರ್ತಿಕುಮಾರ್, ಪ್ರಸಾದ್ ಎಂಬುವರು ತಮಗೆ ಜಮೀನು ಮಂಜೂರು ಮಾಡುವಂತೆ ಕಂದಾಯ ಸಚಿವ ಅಶೋಕ್ ಗೆ ಮನವಿ ಸಲ್ಲಿಸಿದ್ದರು ಎಂದು ಹೇಳಲಾಗಿದೆ.

























Discussion about this post