ಚಿಕ್ಕಮಗಳೂರು: ನಾಡಿನ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ಈಶಾ ಪೌಂಡೇಷನ್ ಕಾವೇರಿ ಕೂಗು ಅಭಿಯಾನದ ಮೂಲಕ ರೈತರನ್ನು ಅರಣ್ಯ ಕೃಷಿಗೆ ಪ್ರೋತ್ಸಾಹಿಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಕೈಜೋಡಿಸುವಂತೆ ಕಾವೇರಿ ಕೂಗು ಅಭಿಯಾನದ ಸ್ವಯಂ ಸೇವಕಿ ವೈಶಾಲಿ ಮನವಿ ಮಾಡಿದರು.
ನಗರದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿನ ೯ ಜಿಲ್ಲೆಗಳಲ್ಲಿ ಮರ ಆಧಾರಿತ ಕೃಷಿ ಗಿಡಗಳನ್ನು ಬೆಳೆಸುವ ಹಾಗೂ ರೈತ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ ಅಭಿಯಾನ ಇದಾಗಿದ್ದು, ರೈತ ಸಂಕುಲಕ್ಕೆ ಸರ್ಕಾರದ ನೆರವು ಕೊಡಿಸುವುದು ಹಾಗೂ ಅರಣ್ಯ ಕೃಷಿ ಪರಿಕಲ್ಪನೆಯಡಿ ೨೪೨ ಕೋಟಿ ಮರಗಳನ್ನು ಬೆಳೆಸುವ ಮಹತ್ವದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮುಖ್ಯವಾಗಿ ಕಾವೇರಿ ನದಿ ತಟದಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಮರಬೇಸಾಯ ಕೃಷಿಯನ್ನು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅತಿವೃಷ್ಟಿ, ಭೂಕುಸಿತದಂತಹ ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ, ಜೊತೆಗೆ ಹೆಚ್ಚಾಗಿ ಮರಗಳನ್ನು ಬೆಳೆಸುವುದರಿಂದ ತಮ್ಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಾಗಲಿದ್ದು ಆದಾಯವು ಸಿಗಲಿದೆ ಎಂದರು.
ಜಿಲ್ಲೆಯಲ್ಲಿ ಆಗಸ್ಟ್ ೫ರಿಂದ ೧೩ ರವರೆಗೆ ಸುಮಾರು ೬೩ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ೧೨೦೦ ಕ್ಕೂ ಹೆಚ್ಚು ರೈತರಿಗೆ ಮರಬೇಸಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಮರ ಆಧಾರಿತ ಕೃಷಿಯ ಅಳವಡಿಕೆ ಮತ್ತು ಅನುಷ್ಠಾನದ ಮೂಲಕ ಈ ಪ್ರದೇಶಕ್ಕೆ ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಸಾವಯವ ಅಂಶವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮೂಲಕ ಪರಿವರ್ತನೆಗೆ ಅನುಕೂಲ ಮಾಡಿಕೊಡಲಿದೆ ಇದಕ್ಕಾಗಿ ಈಶಾ ಪೌಂಡೇಷನ್‌ನಿಂದ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಟೇಟ್ ಆಫ್ ದ ಆರ್ಟ್ ಎಂಬ ಆಪ್ ಬಳಸಿಕೊಂಡು ರೈತರ ಬೇಡಿಕೆಯನ್ನು ನೊಂದಾಯಿಸಲು ಮರ ಮಿತ್ರರು ಎಂಬುವವರನ್ನು ನೇಮಿಸಲಾಗಿದ್ದು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಈಶಾ ಫೌಂಡೇಷನ್ ವ್ಯವಸ್ಥಾಪಕ ಆನಂದ್ ಮಾತನಾಡಿ ನಗರೀಕರಣ ಬೆಳೆದಂತೆ ಅರಣ್ಯ ನಾಶವಾಗುತ್ತಿದ್ದು, ಭೂಮಿಯ ಜೈವಿಕಾಂಶದ ಮರುಪೂರೈಕೆಯೂ ಆಗುತ್ತಿಲ್ಲ, ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ ಕಾವೇರಿಗೆ ಮತ್ತೇ ಜೀವಂತಿಕೆ ತಂದುಕೊಡುವ ಆಂದೋಲನವೇ ಕಾವೇರಿ ಕೂಗು. ಕಾವೇರಿ ಜಲಾನಯನ ಹಾಗೂ ನದಿ ಪಾತ್ರದ ಸರ್ಕಾರಿ ಭೂಮಿಗಳಲ್ಲಿ ಸ್ಥಳೀಯ ಪ್ರಬೇಧದ ಮರಗಳು ಮತ್ತು ಖಾಸಗಿ ಜಮೀನುಗಳಕಲ್ಲಿ ಅರಣ್ಯ ಕೃಷಿ ಅಂದರೆ ಸಾಂಪ್ರಾದಾಯಿಕ ಬೆಳೆಗಳ ಜೊತೆ ಹಣ್ಣು ಕಾಡು ಜಾತಿಯ ಮರಗಳನ್ನು ಬೆಳೆಸುವುದು ಇದರ ಪರಿಕಲ್ಪನೆಯಾಗಿದೆ ಎಂದರು.
ರೈತರು ತಮ್ಮ ಪೂರ್ತಿ ಜಮೀನಿನಲ್ಲಿ ಅರಣ್ಯ ಕೃಷಿ ಆರಂಭಿಸದೆ ಕೇವಲ ಮೂರನೇ ಒಂದರಷ್ಟು ಕೃಷಿ ಭೂಮಿಯಲ್ಲಿ ಜಮೀನಿನ ಸುತ್ತಮುತ್ತ ಅರಣ್ಯ ಕೃಷಿ ಆರಂಬಿಸುವುದು ಇದರ ಉದ್ದೇಶವಾಗಿದೆ. ಉಳಿದ ಭಾಗದಲ್ಲಿ ರೈತರು ತಮಗೆ ಬೇಕಾದ ಬೆಳೆಗಳನ್ನು ಬೆಳೆಯಬಹುದಾಗಿದೆ. ಇಂತಿಷ್ಟು ವರ್ಷಗಳ ಬಳಿಕ ರೈತರು ತಮ್ಮ ಜಮೀನಿನಲ್ಲಿ ನೆಟ್ಟ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಲಾಗುವುದು ಹೀಗೆ ಕಡಿದ ಜಾಗದಲ್ಲಿ ಬೇರೆ ಗಿಡಗಳನ್ನು ನೆಡುವ ಮೂಲಕ ಆದಾಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಬೆಳೆಗಾರರಾದ ಅರವಿಂದ್ ಸೇರಿದಂ ಈಶಾ ಫೌಂಡೇಷನ್ ಸ್ವಯಂಸೇವಕರು ಉಪಸ್ಥಿತರಿದ್ದರು.

























Discussion about this post