ಚಿಕ್ಕಮಗಳೂರು: ಗ್ರಾಮಗಳ ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಮತ್ತು ಪಿಡಿಒಗಳಿಗೆ ಮಂಗಳವಾರ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.
ಅವರು ಮಂಗಳವಾರ ಎಐಟಿ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮದ ಆಯೋಜನೆ ಕುರಿತು ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳು ಸಮಗ್ರವಾದ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಸಮಗ್ರ ಮಹತ್ವದ ಯೋಜನೆ ಕುರಿತಂತೆ ಮೂರು ದಿನಗಳ ಕಾಲ ಕಾಲೇಜು ಸಭಾಂಗಣದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು. ಗ್ರಾಮೀಣಾಭಿವೃದ್ಧಿ ಇಲಾಖೆ, ಆರೋಗ್ಯ, ಕೃಷಿ ಇಲಾಖೆ ಸೇರಿದಂತೆ ವಿವಿಧ ಮಹತ್ವದ ಇಲಾಖೆಗಳಿಂದ ವಸ್ತುಪ್ರದರ್ಶನ ನಡೆಯಲಿದ್ದು ನಗರದ ವಸತಿ ನಿಲಯಗಳ ವಿದ್ಯಾರ್ಥಿಗಳು ಕೋವಿಡ್ ನಿಯಮಾನುಸಾರ ಭಾಗವಹಿಸಲಿದ್ದು ಸಾರ್ವಜನಿಕರು, ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.
ಸ್ವಚ್ಚಭಾರತ ಯೋಜನೆಗೆ ಸಂಬಂಧಿಸಿದಂತೆ ಸ್ವಚ್ಚ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಸಮುದಾಯ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಿಲ್ಲೆಯ ೨೨೬ ಗ್ರಾಮಪಂಚಾಯಿತಿಗಳ ಪೈಕಿ ೧೦೦ ಪಂಚಾಯಿತಿಗಳಲ್ಲಿ ಸೆಪ್ಟಂಬರ್ ಅಂತ್ಯದೊಳಗೆ ಘನತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಸಂಗ್ರಹಣೆ ಸಂಬಂಧಿಸಿದಂತೆ ಶೇ ೧೦೦ ರಷ್ಟು ಸಮಗ್ರವಾಗಿ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ಹಳ್ಳಿಗಳಲ್ಲಿ ಮನೆ ಮನೆ ಕಸಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯಿತಿಗೆ ಒಂದು ಆಟೋಟಿಪ್ಪರ್ ನೀಡಲು ತೀರ್ಮಾನಿಸಿದ್ದು ಸಾಂಕೇತಿಕವಾಗಿ ಈಗಾಗಲೇ ೫೦ ಆಟೋಗಳನ್ನು ನೀಡಲಾಗಿದೆ ಎಂದರು.
ಮನೆ ಮನೆ ಕಸಸಂಗ್ರಹಣೆ, ಸಂಸ್ಕರಣೆ, ನಿರ್ವಹಣೆ ಮಾಡಲು ಸ್ಥಳೀಯ ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವು ಈಗಾಗಲೇ ೫ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಜರುಗಿದೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮಹತ್ವದ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಆಸ್ತಿ ರಕ್ಷಣೆ, ಸ್ವಚ್ಚತೆ, ಪಾರದರ್ಶಕ ಆಡಳಿತಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು ಎಂದರು.
ಕೆರೆಗಳ ಪುನಶ್ಚೇತನ, ಜಲಮೂಲಗಳ ಸಂರಕ್ಷಣೆ ಸಂಬಂಧಿಸಿದಂತೆ ಶಿವಾನಂದ ಕಳವೆ, ಅಧಿಕಾರ ವಿಕೇಂದ್ರಿಕರಣದಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪಾತ್ರ ಕುರಿತು ಪ್ರಮೋದ್ ಹೆಗಡೆ, ಪಂಚಾಯಿತಿ ತಂತ್ರಜ್ಞಾನ, ಸುಲಲಿತ ಆಡಳಿತ ವ್ಯವಸ್ಥೆ ಕುರಿತು ಶಂಕರ್ ಕೆ.ಪ್ರಸಾದ್, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಪ್ರಕಾಶ್, ಜಲಜೀವನ ಮಿಷನ್ ಯೋಜನೆ ಕುರಿತು ಪರಮೇಶ್ವರಹೆಗಡೆ, ಗ್ರಾಮಪಂಚಾಯಿತಿಗಳಲ್ಲಿ ವಿಪತ್ತು ನಿರ್ವಹಣೆ ಕುರಿತು ಡಾ. ಪರಮೇಶ್ವರ್ ಮಾಹಿತಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಉಮೇಶ್, ಡಿಡಿಪಿಐ ಮಲ್ಲೇಶಪ್ಪ, ಜಿ.ಪಂ ಉಪಕಾರ್ಯದರ್ಶಿ ಕಿಶೋರ್‌ಕುಮಾರ್, ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಇದ್ದರು.

























Discussion about this post