ಚಿಕ್ಕಮಗಳೂರು: ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲಾ ಸಂಸ್ಕೃತ ಭಾರತೀಯ ಸಹ ಸಂಯೋಜಕ ಪ್ರಶಾಂತ್‌ಶರ್ಮಾ ಮಾತನಾಡಿ, ರಕ್ಷಾ ಬಂಧನ ಹಿಂದೂಗಳ ಪ್ರಾಚೀನ ಹಬ್ಬ ಸಹೋದರತ್ವವನ್ನು ಬಲಗೊಳಿಸುವ ಹಬ್ಬ ಇದಾಗಿದೆ. ಸನಾತನ ಧರ್ಮದ ಆಚರಣೆ, ಸಂಸ್ಕೃತಿಗಳಿಂದ ಹಿಂದೂ ಧರ್ಮ ನಶಿಸಲು ಸಾಧ್ಯವಿಲ್ಲ. ಭಾರತ ಬಲಿಷ್ಠಗೊಳ್ಳುತ್ತಿದೆ ಸೈನ್ಯ, ವೈದ್ಯಕೀಯ, ಆರ್ಥಿಕತೆ ಇನ್ನಿತರ ಕ್ಷೇತ್ರದಲ್ಲೂ ಭಾರತ ವಿಶ್ವಗುರುವಾಗುತ್ತಿದೆ ದೇಶ, ಭಾರತ ಹಾಗೂ ಧರ್ಮದ ರಕ್ಷಣೆಗೆ ಸಂಘಟನೆ ಅತೀ ಮುಖ್ಯ ಎಂದರು.
ಭಾರತೀಯ ಪ್ರಾಚೀನ ಋಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟ ಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು. ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ಆಚರಣೆ ನಡೆದು ಬಂದಿದೆ. ಶ್ರಾವಣ ಮಾಸ ಹಬ್ಬಗಳ ಆಗರವಾಗಿದ್ದು, ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ,‘ರಕ್ಷಾಬಂಧನ’, ಮುಂತಾದ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಶಾಖೆಯ ಸ್ವಯಂಸೇವಕ ಕಳವಾಸೆ ರವಿ ಮಾತನಾಡಿ, ರಕ್ಷಬಂಧನ ಸಹೋದರ-ಸಹೋದರಿಯರ ನಿರ್ಮಲ ಪ್ರೀತಿಯ ಪ್ರತೀಕದ ಹಬ್ಬವಾಗಿ ಬೆಳೆದು ಬಂದಿದೆ. ನೂಲನ್ನು ತೊಟ್ಟುಕೊಳ್ಳುವುದು ನಮ್ಮ ಸಂಸ್ಕೃತಿಯ ಸಂಸ್ಕಾರದ ಒಂದು ಅಂಗ. ಸೂತ್ರ ಬಂಧನದ ಹಿಂದೆ ರಕ್ಷಣೆಯ ಭಾರವಿರುವುದರಿಂದ ‘ರಕ್ಷಾಬಂಧನ’ ಎಂಬ ಹೆಸರು ಬಂದಿದೆ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಹಿಂದೆಲ್ಲಾ ರಕ್ಷಾ ಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆಯ ನೂಲನ್ನು ರಾಖಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದೆವು. ಇಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಖಿ ವೈಶಿಷ್ಟ್ಯಪೂರ್ಣವಾದುದು ಎಂದು ಹೇಳಿದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ರಾಬರ್ಟ್, ಲಲಿತಮ್ಮ, ಧರ್ಮಶೆಟ್ಟಿ, ಬ್ಯಾಟ್ರಿ ಮಂಜಣ್ಣ, ಪ್ರಸಾದ್, ಸರಸ್ವತಿ, ಸುನೀಲ್, ಸೌಮ್ಯ, ಸುಜಾತ ಇದ್ದರು.

























Discussion about this post