ಚಿಕ್ಕಮಗಳೂರು: ನಗರದಲ್ಲಿ ಕಳಪೆ ಕಾಮಗಾರಿಯಿಂದಾಗಿ ಗುಂಡಿಬಿದ್ದಿರುವ ರಸ್ತೆಗಳನ್ನು ಕೂಡಲೇ ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಕೆಪಿಸಿಸಿ ಕಿಸಾನ್ ಸೆಲ್ ಘಟಕ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಸರ್ಕಾರ ಹಾಗೂ ನಗರಸಭೆ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಶಂಕರಪುರದ ೧೧ನೇ ವಾರ್ಡ್ನಲ್ಲಿ ಗುಂಡಿಬಿದ್ದ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡುವ ಮೂಲಕ ಇಲ್ಲಿನ ನಗರಸಭೆ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಿಸಾನ್ ಸೆಲ್ ಘಟಕ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ, ಕಾಮಗಾರಿಗಳ ಹೆಸರಲ್ಲಿ ಕೋಟ್ಯಾಂತರ ಹಣವನ್ನು ಲೂಟಿ ಮಾಡಿದೆ. ಜಿಲ್ಲೆಯಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸ್ಥಳೀಯ ಶಾಸಕರು, ನಗರಸಭೆ ಸಾರ್ವಜನಿಕರ ಬಗ್ಗೆ ಕಿಂಚಿತ್ತು ಕನಿಕರ ಇಲ್ಲದಂತೆ ವರ್ತಿಸುತ್ತಿದೆ. ಇಷ್ಟೇಲ್ಲ ಅವ್ಯವಹಾರ ಹಗರಣ ನಡೆದರೂ ಬಸವರಾಜ ಬೊಮ್ಮಾಯಿಯವರ ಸರ್ಕಾರ ಕಣ್ಮುಚ್ಚಿ ಕುಳಿತಂತಿದೆ ಎಂದು ಆರೋಪಿಸಿದರು.
ನಗರದಲ್ಲಿ ಕೈಗೊಂಡಿರುವ ಅಮೃತ್ ಕುಡಿಯುವ ನೀರು ಯೋಜನೆ, ಹಾಗೂ ಯುಜಿಡಿ ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ಅಪೂರ್ಣಗೊಂಡಿದ್ದ ಕಾಮಗಾರಿಯನ್ನೇ ಉದ್ಘಾಟಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಭ್ರಷ್ಟಾಚಾರ ಹಗರಣದಲ್ಲಿ ತೊಡಗಿದ್ದಾರೆ ಎಂದು ದೂಷಿಸಿದರು.
ಅಚ್ಚೆದಿನ್ ಎಂದು ಪ್ರಚಾರ ಪಡೆಯುವ ಪ್ರಧಾನಿಗಳು ಆರಂಭದಲ್ಲಿ ಉದ್ಯೋಗ ಒಳಗೊಂಡಂತೆ ಸುಳ್ಳುಭರವಸೆಗಳ ಮೂಳಕ ಅಧಿಕಾರಕ್ಕೆ ಬಂದಿದ್ದರು. ಆದರೆ ಕಳೆದ ೨ವರ್ಷದಲ್ಲಿ ಕೋವಿಡ್ನಿಂದ ಸುಮಾರು ೨ ಕೋಟಿಗೂ ಹೆಚ್ಚು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಯ ಬದಲು ಸರ್ಕಾರ ಇರುವ ಸರ್ಕಾರಿ ಸಂಸ್ಥೆಗಳನ್ನು ಅಂಬಾನಿ, ಅದಾನಿಯಂತಹ ಉದ್ಯಮಿಗಳ ಕೈಗೆ ಒಪ್ಪಿಸಿ ಗುಲಾಮಿತನದ ಆಡಳಿತ ನಡೆಸಲು ಸರ್ಕಾರ ಮುಂದಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕರಿಗೆ ಆಫಘಾನಿಸ್ತಾನ, ಪಾಕಿಸ್ತಾನದಲ್ಲಿರುವ ಜನರ ಚಿಂತೆಯೇ ಹೊರತು.ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ, ಅವರ ಸಮಸ್ಯೆಗಳ ಆಲಿಸಬೇಕಾದವರು ಹೆಚ್ಚು ಸುಳಿಯುತ್ತಿಲ್ಲ. ಎಂದು ವ್ಯಂಗ್ಯವಾಡಿದ ಅವರು ಕಳಪೆ ಕಾಮಗಾರಿಯಿಂದಾಗಿ ನಗರದ ರಸ್ತೆಗಳು ಗುಂಡಿಬಿದ್ದು ಅಪಘಾತಕ್ಕೆ ಬಾಯ್ತರೆದಿವೆ. ಯುಜಿಡಿ, ಅಮೃತ್ ಯೋಜನೆಗಳಲ್ಲಿ ಕೋಟ್ಯಾಂತರ ಭ್ರಷ್ಟಾಚಾರ ನಡೆದು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಈ ಬಗ್ಗೆ ಗಮನ ಹರಿಸಲಿ ಎಂದರು.
ಇಲ್ಲಿನ ಅಧಿಕಾರಿ ವರ್ಗ ಕ್ಷೇತ್ರದ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅದಾನಿ, ಅಂಬಾನಿಯವರ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ. ಇಲ್ಲಿನ ನಗರಭೆ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದರು.
ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಯಲ್ಷರೀಫ್ ಮಾತನಾಡಿ ಸಾರ್ವಜನಿಕರಿಂದ ವಿವಿಧ ಕಂದಾಯ ತೆರಿಗೆ ವಸೂಲಿ ಮಾಡುವ ನಗರಸಭೆ ಅವರಿಗೆ ಸೇವೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನಗರದ ಬಹುತೇಕ ವಾರ್ಡ್ಗಳು ಗುಂಡಿಮಯವಾಗಿದೆ. ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ದೂಷಿಸಿದರು.
ಕಾಂಗ್ರೆಸ್ ಮುಖಂಡ ಶಹಬುದ್ದೀನ್ ಮಾತನಾಡಿ ಕ್ಷೇತ್ರದ ಶಾಸಕರು ಜಿಲ್ಲೆ ಮೂಲೆ ಮೂಲೆಯಲ್ಲಿ ರಸ್ತೆ, ಚರಂಡಿ ಒಳಗೊಂಡಂತೆ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಪ್ರಚಾರ ಪಡೆದುಕೊಳ್ಳುವ ಅವರು ಮೊದಲು ನಗರದ ಎಲ್ಲಾ ವಾರ್ಡ್ಗಳಿಗೂ ಒಮ್ಮೆ ಭೇಟಿ ಕಳಪೆ ಕಾಮಗಾರಿಯಿಂದಾಗಿ ಗುಂಡಿಬಿದ್ದ ರಸ್ತೆಗಳ ಅವ್ಯಸ್ಥೆಯನ್ನು ಪರಿಶೀಲಿಸಲಿ, ನಗರಸಭೆ, ಜಿಲ್ಲಾಡಳಿತ ದುರಸ್ಥಿಗೊಳಿಸುವ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಿದರು.
ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ಮಾತನಾಡಿ ನಗರದ ದೀಪಾನರ್ಸಿಂಗ್ ಹೋಂ ಎದುರಿನ ಶಂಕರಪುರ ೧೧ನೇ ವಾರ್ಡ್ನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ನಗರಸಭೆ ಹಾಗೂ ಜಿಲ್ಲಾಡಳಿತ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ, ಜನರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ರಸ್ತೆಗಳನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ರಿಜ್ವಾನ್, ಜಮೀರ್, ಸಾಧಿಕ್, ಕಾರ್ಯದರ್ಶಿ ಮದನ್, ಮಂಜುನಾಥ್, ನೂರುಲ್ಲಾಖಾನ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post