ಚಿಕ್ಕಮಗಳೂರು: ನಗರ ವ್ಯಾಪ್ತಿಗೆ ಸೀಮಿತಗೊಳಿಸಿರುವ ಆಟೋ ಪರ್ಮಿಟ್‌ನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಪುನರ್ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದರು.
ನಗರ ವ್ಯಾಪ್ತಿಗೆ ಸೀಮಿತವಾಗಿರುವ ಆಟೋ ಪರ್ಮಿಟ್ ಅನುಷ್ಠಾನಕ್ಕೆ ಬಂದಲ್ಲಿ ಇದೇ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಸಾವಿರಾರು ಆಟೋ ಕಾರ್ಮಿಕರ ಬದುಕಿಗೆ ಕತ್ತರಿ ಬೀಳಲಿದೆ. ಈ ತೀರ್ಮಾನ ಅವೈಜ್ಞಾನಿಕವಾಗಿದ್ದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಆದೇಶವನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ಸರ್ಕಾರ ಹಾಗೂ ಜಿಲ್ಲಾಡಳಿವನ್ನು ಆಗ್ರಹಿಸಿದರು.
ಕೋವಿಡ್ ಕಾರಣದಿಂದಾಗಿ ಆಟೋ ಚಾಲಕರ ಬದುಕು ಮೂರಾಬಟ್ಟೆಯಾಗಿದೆ. ಈ ನೀತಿಯು ಅನುಷ್ಠಾನಗೊಂಡಲ್ಲಿ ನಗರ ಮಾತ್ರವಲ್ಲದೇ ಮಲೆನಾಡು ಭಾಗದ ಆಟೋ ಚಾಲಕರಿಗೆ ತೊಂದರೆಯಾಗಲಿದೆ ಆದ ಕಾರಣ ಈ ಹಿಂದಿನಂತೆ ಯಥಾಸ್ಥಿತಿ ಆಟೋ ಪರ್ಮಿಟ್ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಈ ನೀತಿ ಅನುಷ್ಠಾನಗೊಂಡಲ್ಲಿ ಆಟೋ ಚಾಲಕರು ಹಾಗೂ ಮಾಲೀಕರಿಗೆ ಬೆಂಬಲವಾಗಿ ಕಾಂಗ್ರೆಸ್ ನಿಲ್ಲಲಿದೆ. ಈ ಆದೇಶ ಅನುಷ್ಠಾನಗೊಳಿಸುವ ಮುನ್ನಾ ಚರ್ಚಿಸಿ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದೂ ದೇವಾಲಯ ತೆರವಿಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಮಾತನಾಡಿ ಹಿಂದೂತ್ವ ಎನ್ನುವ ಬಿಜೆಪಿ ಸರ್ಕಾರ ಇದೀಗ ಹಿಂದೂ ದೇವಾಲಯಗಳನ್ನು ತೆರವು ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನವಿರುವುದು ಅನಧೀಕೃತವಾಗಿ ಆಕ್ರಮಿತಗೊಂಡಲ್ಲಿ ದೇವಾಲಯಗಳ ತೆರವುಗೊಳಿಲು ಮುಂದಾಗಬೇಕು, ಆದರೆ ಜಿಲ್ಲಾಡಳಿತ ದೇವಸ್ಥಾನ ಮಂಡಳಿಯೊಂದಿಗೆ ಯಾವುದೇ ಚರ್ಚೆ ನಡೆಸದೆ ಪುರಾತನ ದೇವಾಯಲಗಳನ್ನು ಏಕಾಏಕಿ ತೆರವು ಮಾಡುತ್ತಿರುವುದು ಖಂಡನೀಯ. ಬಿಜೆಪಿ ಕೆಲ ನಾಯಕರು ನಕಲಿ ಹಿಂದುತ್ವವಾದಿಗಳು ಎಂದು ದೂಷಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ತನೋಜ್‌ಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮಶೇಖರ್, ಇದ್ದರು.

























Discussion about this post