ಚಿಕ್ಕಮಗಳೂರು: ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದಲ್ಲಿ ನೆಲಗಡಲೆ ಬೆಳೆಯಲ್ಲಿ ಲಘು ಪೋಷಕಾಂಶಗಳ ಬಳಕೆಯ ಬಗ್ಗೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ವಿಜ್ಞಾನಿ (ಮಣ್ಣು ವಿಜ್ಞಾನ) ಡಾ. ಧನಲಕ್ಷ್ಮೀ.ಡಿ, ಮಾತನಾಡಿ, ಎಣ್ಣೆ ಕಾಳು ಬೆಳೆಗಳಲ್ಲಿ ಪ್ರಮಖವಾದ ಬೆಳೆಯಾದ ನೆಲಗಡಲೆ ಬೆಳೆಯ ಉತ್ಪಾದನೆಯಲ್ಲಿ ಇಳಿಮುಖ ಕಂಡುಬರುತ್ತಿದೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ವೈಜ್ಞಾನಿಕ ಬೇಸಾಯ ಪದ್ದತಿಯನ್ನು ಅಳವಡಿಸದೆ ಇರುವುದರ ಜೊತೆಗೆ ಶಿಫಾರಸ್ಸು ಪ್ರಮಾಣದ ರಸಗೊಬ್ಬಗಳನ್ನು ಬಳಸದಿರುವುದು.
ಹಾಗಾಗಿ ಪ್ರಧಾನ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳಾದ ಸತು ಮತ್ತು ಬೋರಾನ್ ಅನ್ನು ಪೂರೈಸುವುದು ಅತಿ ಮುಖ್ಯ. ಇಲ್ಲವಾದಲ್ಲಿ ಲಘು ಪೋಷಕಾಂಶಗಳ ಕೊರತೆಯಿಂದ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುವುದರ ಜೊತೆಗೆ ಇಳುವರಿಯಲ್ಲಿ ಇಳಿಮುಖ ಕಂಡುಬರುತ್ತದೆ.
ಸತು ಮತ್ತು ಬೋರಾನ್ ಬಳಕೆಯಿಂದ ಸಸ್ಯಗಳ ಅಂಗಾಂಶಗಳ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಬೇರುಗಳು, ಹೂವಿನ ಬೆಳವಣಿಗೆ ಹಾಗೂ ಪರಾಗಕಣಗಳ ಉತ್ಪಾದನೆಯಲ್ಲಿ ಸಹಾಯ ಮಾಡುವುದರ ಜೊತೆಗೆ ಕಾಳುಗಳ ಗಾತ್ರ ಮತ್ತು ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದುದರಿಂದ, ಲಘು ಪೋಷಕಾಂಶಗಳನ್ನು ಸರಿಯಾದ ಸಮಯಕ್ಕೆ ಸೂಕ್ತವಾದ ರೂಪದಲ್ಲಿ ಬೆಳೆಗಳಿಗೆ ನೀಡುವುದು ಅಗತ್ಯವೆಂದು ತಿಳಿಸಿದರು.
ಗ್ರಾಮದ ಪ್ರಗತಿಪರ ರೈತರಾದ ಮಲ್ಲಿಕಾರ್ಜುನ್ ಮಾತನಾಡಿ, ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (೪ ಕಿ.ಗ್ರಾಂ) ಮತ್ತು ಬೊರಾಕ್ಸ್ (೧.೬ ಕಿ.ಗ್ರಾಂ.) ನ್ನು ೪ ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ ಬೆರೆಸಿ ಬಿತ್ತನೆಗೆ ಮುಂಚೆ ಭೂಮಿಗೆ ಸೇರಿಸಿದ್ದವು. ಈ ಲಘು ಪೋಷಕಾಂಶದ ಬಳಕೆಯಿಂದ ನೆಲಗಡಲೆ ಕಾಳುಗಳ ಗಾತ್ರ ಹೆಚ್ಚಾಗಿರುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆದುಕೊಂಡೆವು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಲಘುಪೋಷಕಾಂಶಗಳನ್ನು ಬಳಸಲು ಹಾಜರಿದ್ದ ಎಲ್ಲಾ ರೈತರು ಇಂಗಿತ ವ್ಯಕ್ತಪಡಿಸದರು.

























Discussion about this post