ಚಿಕ್ಕಮಗಳೂರು: ದೇಶದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಶೇ.16 ರಷ್ಟು ಮಕ್ಕಳು ಮಧುಮೇಹದಿಂದ ಬಳಲುತ್ತಿದ್ದಾರೆಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರದ ಸಮರ್ಪಣಾದಲ್ಲಿ ಲಿಂಗದಹಳ್ಳಿಯ ಸಿಹಿ ಮಧುಮೇಹ ಹಿಮ್ಮುಖವಾಗಿಸುವ ಸಂಸ್ಥೆ ಮತ್ತು ಸಮರ್ಪಣಾ ಟ್ರಸ್ಟ್ ಏರ್ಪಡಿಸಿದ್ದ ಮಧುಮೇಹ ಹಿಮ್ಮುಖವಾಗಿಸುವ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ ಶೇ.53 ರಷ್ಟು ಮಂದಿ ತಪಾಸಣೆಗೆ ಒಳಗಾದರೆ,ಉಳಿದ ಶೇ.43 ಮಂದಿ ತಪಾಸಣೆಗೆ ಒಳಗಾಗದೆ ಜಡತ್ವ ಪ್ರದರ್ಶಿಸವುದು ಮಧುಮೇಹ ಏರಿಕೆಗೆ ಕಾರಣ ಎಂದರು.
ಇಂದಿನ ಬದಲಾದ ಆಹಾರ ಪದ್ಧತಿಯಿಂದ,ಹೆಚ್ಚಿದ ಮಾಲಿನ್ಯ,ವಿಪರೀತ ಒತ್ತಡ ಸಹ ಮಧುಮೇಹ ಹೆಚ್ಚಳಕ್ಕೆ ಕಾರಣ ಎಂದು ವಿವರಿಸಿದರು. ಈ ರೀತಿ ಆರೋಗ್ಯ ಶಿಬಿರಗಳನ್ನು ಸಂಸ್ಥೆಗಳು ಏರ್ಪಡಿಸಲು ಮುಂದಾದಲ್ಲಿ ಜಿಲ್ಲಾಡಳಿತ ಸಹ ಕೈಜೋಡಿಸುವುದೆಂದರು. ಜಿಲ್ಲೆಯಲ್ಲಿ ಪಂಚಾಯತಿ ಮಟ್ಟದಲ್ಲಿ ಈ ತರದ ಆರೋಗ್ಯ ಶಿಬಿರ ನಡೆದು ಜನಜಾಗೃತಿ ಮೂಡಿಸುವುದು ಅತಿ ಮುಖ್ಯವೆಂದು ಹೇಳಿದರು.
ಆಯುಶ್ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಗೀತಾ ಮತನಾಡಿ,ಜನ ಋತುಚರ್ಯ ಆಹಾರ ಪದ್ಧತಿಯಿಂದ ವಿಮುಖರಾಗಿರುವುದು ಮಧುಮೇಹದಂತ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವೆಂದರು. ನಗರದಲ್ಲಿ 50 ಹಾಸಿಗೆಗಳ ಆಯುಶ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು,ಸಧ್ಯದಲ್ಲೆ ಆಸ್ಪತ್ರೆಯ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಕೋವಿಡ್ ನಿಯಂತ್ರಣಕ್ಕೆ ಆಯುಷ್ ನಿಂದ ಕೆಲವು ಕಷಾಯ,ಅರಿಶನದ ಬಳಕೆ ಬಗ್ಗೆ ತಿಳುವಳಿಕೆ ನೀಡಲಾಯಿತೆಂದು ನುಡಿದರು.
ಸಿಹಿ ಸಂಸ್ಥೆ ಮುಖ್ಯಸ್ಥ ಡಾ.ಗೌತಮ್ ಮಾತನಾಡಿ ಮಧುಮೇಹವನ್ನು ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಅದರಿಂದ ಮುಕ್ತವಾಗಬಹುದೆಂದು ಹೇಳಿದರು. ಟ್ರಸ್ಟ್ ಅಧ್ಯಕ್ಷ ಬಿ. ಹೆಚ್.ನರೇಂದ್ರಪೈ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮಲ್ಲಿಕಾರ್ಜುನ ರಾವ್ ಸ್ವಾಗತಿಸಿದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಡಾ.ವಿಕ್ರಮ್ ವಂದಿಸಿದರು.

























Discussion about this post