ಚಿಕ್ಕಮಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡಿದ್ದು ಅದನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಅಧ್ಯಯನ, ತರಬೇತಿ ಪಡೆದುಕೊಳ್ಳುವ ಅಗತ್ಯವಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ್ ಹೇಳಿದರು.
ನಗರದ ಬಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಚಿಕ್ಕಮಗಳೂರು ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕಾರ್ಯಾಕಾರಿ ಮತ್ತು ಶೈಕ್ಷಣಿಕ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡಿದ್ದು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ, ಹೊಸ ಶಿಕ್ಷಣದ ವಿಧಾನ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಬೋಧಿಸುವ ಮೂಲಕ ಸಮಗ್ರ ಅನುಷ್ಠಾನಕ್ಕೆ ಶಿಕ್ಷಕರು ಸಜ್ಜುಗೊಳ್ಳಬೇಕಿದೆ ಅದಕ್ಕಾಗಿ ಅಧ್ಯಯನ ತಿಳುವಳಿಕೆ ಅಗತ್ಯ ಎಂದರು.
ಪ್ರಸ್ತುತ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಅಧಿಕವಾಗಿದೆ. ಮುಚ್ಚಿದ ಶಾಲೆಗಳು ಪುನರಾಂಭಗೊAಡಿದೆ ಶೈಕ್ಷಣಿಕ ಉದ್ದೇಶಗಳನ್ನು ಈಡೇರಿಸಲು ಶಿಕ್ಷಕರು ಶ್ರಮಿಸಬೇಕು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡಿ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ಮಾದರಿ ಶಾಲೆಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಹಲವಾರು ಸಮಸ್ಯೆಗಳಿವೆ ಅದರಲ್ಲೂ ವರ್ಗಾವಣೆ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಯಾಗಿ ಉಳಿದಿದೆ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘ ಶ್ರಮಿಸಲಿದೆ ಎಂದು ಹೇಳಿದರು.
ಹಳ್ಳಿಜನರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮ ದೊಡ್ಡದು. ಸರ್ಕಾರದಿಂದ ಅಗತ್ಯ ಸವಲತ್ತುಗಳನ್ನು ದೊರಕಿಸಿ, ಇಲಾಖೆಗೆ ಸಂಬAಧಿಸಿದ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ಇದೇ ವೇಳೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಇಲಾಖೆಗೆ ಸಂಬAಧಿಸಿದ ಹಲವು ಸಮಸ್ಯೆಗಳನ್ನು ತೆರೆದಿಟ್ಟರು. ವೈದ್ಯಕೀಯ ವೆಚ್ಚ ಮರುಪಾವತಿ. ಚುನಾವಣಾ ವೆಚ್ಚ ಪಾವತಿ, ವರ್ಗಾವಣೆ ವಿಚಾರ, ಕೆಜಿಡಿಐ ಸಾಲ ಸೇರಿದಂತೆ ಹಲವಾರು ಮಾಹಿತಿಗಳನ್ನು ಸಭೆಯಲ್ಲಿ ಚರ್ಚಿಸಿದರು.
ಚಿಕ್ಕಮಗಳೂರು ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ೪,೬೫೦ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ೩ ಸಾವಿರ ಶಿಕ್ಷಕರು ಪದವಿ ಅರ್ಹತೆ ಹೊಂದಿದ್ದು ಅವರನ್ನು ಹಿರಿಯ ಪ್ರಾಥಮಿಕ ಶಾಲೆಗಳಿಗೆ ೬ ರಿಂದ ೮ನೇ ತರಗತಿಗೆ ಬೋಧಿಸಲು ಅವಕಾಶ ನೀಡಿ ಪದನ್ನೋತಿ ನೀಡಬೇಕು ಎಂದು ಒತ್ತಾಯಿಸಿದರು.
ಕಿರಿಯ ಪ್ರಾಥಮಿಕ ಶಾಲೆಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಭೌತಿಕವಾಗಿ ತೆರೆಯಲಿದ್ದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಕ್ಕಳ ಸಮಗ್ರ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ನೀಡಬೇಕು, ಕೋವಿಡ್ ಕಾರಣ ಶಾಲೆಗಳು ತಡವಾಗಿ ಪುನರಾರಂಭಗೊಳ್ಳುತ್ತಿದ್ದು ಶಾಸಕರ ಅನುದಾನ, ದಾನಿಗಳ ದೇಣಿಗೆ ಪಡೆದು ದುರಸ್ಥಿಗೊಳಿಸಿ ಶಾಲೆಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಭೈರೇಗೌಡ, ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ನಾಗರಾಜ್, ಬಸವನಹಳ್ಳಿ ಶಾಲೆಯ ಮುಖ್ಯಶಿಕ್ಷಕ ತಿಮ್ಮಪ್ಪ, ಹಾಗೂ ಎಲ್ಲಾ ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.

























Discussion about this post