ಚಿಕ್ಕಮಗಳೂರು: ಸೆಪ್ಟೆಂಬರ್ ೨೭ ರಂದು ಬಂದ್ ಹಿನ್ನೆಲೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ಕೈಕೊಳ್ಳುವಂತೆ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮನವಿ ಮಾಡಿದರು.
ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಪತ್ರಿಕಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸೆ.೨೭ ರಂದು ವಿವಿಧ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಅದೇ ದಿನ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಯಲಿದ್ದು. ಮಾನವೀಯ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಯಾವುದೇ ತೊಂದರೆಯಾಗದಂತೆ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲೆಯ ೧೧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಚಿಕ್ಕಮಗಳೂರು ೩, ತರೀಕೆರೆ ಅಜ್ಜಂಪುರ ತಾಲ್ಲೂಕಿನಲ್ಲಿ ೨, ಇನ್ನುಳಿದಂತೆ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಪರೀಕ್ಷೆ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೧೯೨ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಹಾಜರಾಗಲಿದ್ದಾರೆ. ಕೋವಿಡ್ ಜತೆಗೆ ಭಾರತ್ ಬಂದ್ ಕರೆ ಹಿನ್ನಲೆ ಜಿಲ್ಲಾಡಳಿತ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಹಿನ್ನಲೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೈಸ್ ಮಾಡಲಾಗಿದ್ದು, ಪ್ರತಿ ಕೊಠಡಿಗೆ ೧೨ ವಿದ್ಯಾರ್ಥಿಗಳ ಆಸನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜ್ವರ, ಶೀತ, ಕೆಮ್ಮು ಮುಂತಾದ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಕೇಂದ್ರದಲ್ಲಿ ೩ ಪರೀಕ್ಷಾ ಕೇಂದ್ರ, ಬೀರೂರು, ತರೀಕೆರೆ ಮತ್ತು ಅಜ್ಜಂಪುರ ಕೊಪ್ಪ, ಶೃಂಗೇರಿ, ಎನ್.ಆರ್ಪುರದಲ್ಲಿ ತಲಾ ಒಂದರಂತೆ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗದಂತೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗದಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪರೀಕ್ಷಾ ಪತ್ರವನ್ನು ತೋರಿಸುವ ಮೂಲಕ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಯಾವುದೇ ತೊಂದರೆಗಳು ಎದುರಾದಲ್ಲಿ ಪೊಲೀಸ್ ತುರ್ತು ವಾಹನ ಸಂಖ್ಯೆ ೧೧೨ ಗೆ ಕರೆ ಮಾಡುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದರು.
ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳಾಗಿ ಕ್ಷೇತ್ರಶಿಕ್ಷಣಾಧೀಕಾರಿಗಳು ಕಾರ್ಯನಿರ್ವಹಿಸಲಿದ್ದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗಲಿದೆ ಎಂದರು.
ಸೆ.೨೭ ರ ಭಾರತ್ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಆದರೆ ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಕಾನೂನು ಚೌಕಟ್ಟಿನಲ್ಲಿ ಬಂದ್ ಮಾಡಲು ಅವಕಾಶವಿಲ್ಲ. ಶಾಂತಿಯುತವಾಗಿ ಯಾವುದೇ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಂದ್ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿ?ಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಒತ್ತಾಯ ಪೂರ್ವಕವಾಗಿ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲ. ಮನವಿ ಮಾಡಿ ಮನವೊಲಿಸುವ ಮೂಲಕ ಅಂಗಡಿಗಳನ್ನು ಮುಚ್ಚಬಹುದು. ಅವಶ್ಯಕ ಸೇವೆಗಳಾದ ಹಾಲು, ತರಕಾರಿ, ಹಣ್ಣು, ಮೆಡಿಕಲ್ ಮತ್ತಿತರ ಸೇವೆಗಳನ್ನು ಒತ್ತಾಯ ಪೂರ್ವಕ ಬಂದ್ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೆ.೨೭ ರ ಬಂದ್ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸುವುದಾಗಿ ವಿವಿಧ ಸಂಘಟನೆಗಳು ಭರವಸೆ ನೀಡಿದೆ, ಸಾರ್ವಜನಿಕರಿಗೆ ತೊಂದರೆ ನೀಡುವುದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ವಾಹನಗಳಿಗೆ ಅಡ್ಡಿಪಡಿಸುವುದು ಕಂಡಲ್ಲಿ, ಕಾನೂನು ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

























Discussion about this post