ನವದೆಹಲಿ: ವಿಶ್ವ ನದಿಗಳ ದಿನದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನದಿಗಳ ಬಗ್ಗೆ ಮಾತನಾಡಿದರು.
ವಿಶ್ವ ನದಿಗಳ ದಿನ:
ಸೆಪ್ಟೆಂಬರ್ ಅತ್ಯಂತ ಮಹತ್ವದ ತಿಂಗಳು. ಈ ತಿಂಗಳಲ್ಲಿ ವಿಶ್ವ ನದಿಗಳ ದಿನವನ್ನು ಆಚರಿಸುತ್ತೇವೆ. ನದಿಗಳು ನಮಗೆ ನಿಸ್ವಾರ್ಥವಾಗಿ ನೀರು ನೀಡುತ್ತವೆ. ಅವುಗಳ ಪರೋಪಕಾರವನ್ನು ನಾವು ಸ್ಮರಿಸಬೇಕು ಎಂದು ಅವರು ಹೇಳಿದರು.
ನದಿ ಉತ್ಸವಕ್ಕೆ ಕರೆ:
ನೀರಿನ ಹನಿಹನಿಯೂ ತುಂಬ ಮುಖ್ಯ. ದೇಶಾದ್ಯಂತ ನದಿ ದಡದ ಮೇಲೆ ವಾಸಿಸುವ ಜನರು ವರ್ಷದಲ್ಲಿ ಒಮ್ಮೆಯಾದರೂ ನದಿಗಳ ಉತ್ಸವ ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ನಮಾಮಿ ಗಂಗಮ್ಮ ತಾಯಿ:
ನಮಾಮಿ ಗಂಗಾ ಮಿಷನ್ನ್ನು ನೆನಪಿಸಿದ ಮೋದಿ ಅವರು, ದೇಶದ ಪವಿತ್ರ ನದಿ ಗಂಗೆಯನ್ನು ಸ್ವಚ್ಛಗೊಳಿಸುವ ಈ ನಮಾಮಿ ಗಂಗಾ ಯೋಜನೆ ಅದ್ಭುತ ಯಶಸ್ಸು ಕಾಣುತ್ತಿದೆ. ಜನರೂ ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ನಾಗಾ ನದಿ ಉಲ್ಲೇಖ:
ತಮಿಳುನಾಡಿನ ನಾಗಾ ನದಿಯ ಉಲ್ಲೇಖ ಮಾಡಿ, ಈ ನಾಗಾ ನದಿ ಒಣಗಿ ಹೋಗಿತ್ತು. ಆದರೆ ಅಲ್ಲಿನ ಹಳ್ಳಿಗಳ ಮಹಿಳೆಯರು, ಸಾರ್ವಜನಿಕರು ಸೇರಿ ನದಿಗೆ ಹೊಸ ಜೀವ ನೀಡಿದರು. ಸ್ವತಃ ಅವರೇ ಕೆಲಸ ಮಾಡಿ ಚೆಕ್ ಡ್ಯಾಂ ನಿರ್ಮಿಸಿಕೊಂಡರು. ಅಲ್ಲೀಗ ಹೇರಳವಾಗಿ ನೀರಿದೆ. ಇದು ತುಂಬ ಖುಷಿಕೊಟ್ಟ ವಿಚಾರ ಎಂದೂ ತಿಳಿಸಿದರು.
ಜಲ್-ಜಿಲಾನಿ ಮಹತ್ವ
ಭಾರತದ ಪಶ್ಚಿಮ ಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ನೀರಿನ ತೀವ್ರ ಅಭಾವ ಇದೆ. ಬರಗಾಲ ಬಾಧಿಸುತ್ತದೆ. ಸರಿಯಾಗಿ ಮಳೆ ಬರಲಿ ಎಂಬ ಪ್ರಾರ್ಥನೆಯೊಂದಿಗೆ ಗುಜರಾತ್ನ ಜನರು ಮಳೆಗಾಲದ ಪ್ರಾರಂಭದಲ್ಲಿ ಜಲ-ಜಿಲಾನಿ ಏಕಾದಶಿ ಆಚರಿಸುತ್ತಾರೆ. ಇದು ನೀರಿನ ಮಹತ್ವವನ್ನು ಸಾರುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.
ನದಿಗಳ ನಿತ್ಯ ಸ್ಮರಣೆ ಅಗತ್ಯ
ಮಾಘ ಮಾಸದ ಆಗಮನವಾಗುತ್ತಿದ್ದಂತೆ ನಮ್ಮ ದೇಶದಲ್ಲಿ ಗಂಗಾನದಿ ಸೇರಿ ಹಲವು ನದಿಗಳ ತಟದಲ್ಲಿ ಕಲ್ಪಾವಾಸ ಆಚರಿಸುತ್ತಾರೆ. ಇಡೀ ತಿಂಗಳೂ ಈ ಆಚರಣೆ ಇರುತ್ತಿತ್ತು. ಆದರೆ ಈಗೀಗ ಕಲ್ಪಾವಾಸ ಕಡಿಮೆಯಾಗುತ್ತಿದೆ. ಹಿಂದೆಲ್ಲ ಜನರು ಮನೆಯಲ್ಲಿ ಸ್ನಾನ ಮಾಡುವಾಗಲೂ ನದಿಗಳ ಹೆಸರನ್ನು ಸ್ಮರಿಸುತ್ತಿದ್ದರು. ಆದರೆ ಈ ಸಂಪ್ರದಾಯವೂ ಈಗ ಕಡಿಮೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಅಸ್ತಿತ್ವದಲ್ಲಿ ಇರಬಹುದು ಎಂದು ಹೇಳಿದರು.
ನದಿಗಳಿಗೂ ಜೀವವಿದೆ:
ದೇಶಾದ್ಯಂತ ನದಿಗಳ ಪುನಶ್ಚೇತನ, ಸ್ವಚ್ಛತೆಗಾಗಿ ಸರ್ಕಾರಗಳು, ವಿವಿಧ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಲೇ ಇರುತ್ತವೆ. ದಶಕಗಳಿಂದಲೂ ಇದು ನಡೆದುಕೊಂಡು ಬಂದಿದೆ. ಭಾರತದ ನದಿಗಳು ಕೇವಲ ಭೌತಿಕ ಅಂಶವಲ್ಲ. ಅವುಗಳಿಗೂ ಜೀವ ಇದೆ. ನದಿಗಳನ್ನು ಸ್ವಲ್ಪವೇ ಮಲಿನಗೊಳಿಸಿದರೂ ಅದು ತಪ್ಪು ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪ್ರತಿಯೊಬ್ಬರೂ ನದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು.
ಗಾಂಧಿ ಸ್ಮರಣೆ:
ಈ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ತತ್ವ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಶುಚಿತ್ವವನ್ನು ಸಾಮೂಹಿಕ ಚಳವಳಿಯನ್ನಾಗಿ ರೂಪಿಸಿದ್ದರು. ನಾವೂ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನ:
ನಿನ್ನೆ ಸೆಪ್ಟೆಂಬರ್ 25 ತುಂಬ ಮಹತ್ವದ ದಿನವಾಗಿದೆ. ಈ ದೇಶದ ಹೆಮ್ಮೆಯ ಪುತ್ರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನ ಮತ್ತು ಮೂರು ವರ್ಷಗಳ ಹಿಂದೆ ಇದೇ ದಿನ ನಮ್ಮ ದೇಶದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಭಾಗ್ಯ ಯೋಜನೆಯಾಗಿದೆ ಎಂದು ಮೋದಿ ನೆನಪಿಸಿದರು.
ತಮ್ಮ ಮನ್ ಕಿಬಾತ್ ವೇಳೆ ದೇಶದಲ್ಲಿ ಒಂದಲ್ಲ ಒಂದು ಹಬ್ಬಗಳು ನಡೆಯುತ್ತಲೇ ಇವೆ. ಆದರೆ ಜನರು ಕೊವಿಡ್ 19 ಸಾಂಕ್ರಾಮಿಕದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೊರೊನಾ ನಿಯಂತ್ರಣದ ಸುರಕ್ಷಾ ಶಿಷ್ಟಾಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳುವುದನ್ನು ಮರೆಯಲಿಲ್ಲ.

























Discussion about this post