ರಂಭಾಪುರಿ ಪೀಠ (ಬಾಳೆಹೊನ್ನೂರು) : ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ ಲಿಂ. ಎ.ಎಂ. ಬಸವೇಗೌಡರ ಧರ್ಮ ಪತ್ನಿ ಗೌರಮ್ಮ ಬಸವೇಗೌಡರ ಅಗಲಿಕೆಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಿ.ಎ.ಎಂ.ಬಸವೇಗೌಡರ ನಂತರ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಆದರ್ಶವಾದ ಸೇವೆಯನ್ನು ಸಲ್ಲಿಸಿದ ಗೌರಮ್ಮ ಬಸವೇಗೌಡರು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷರಾಗಿ, ವೀರಶೈವ ಸಮಾಜದ ಚಿಕ್ಕಮಗಳೂರು ತಾಲೂಕಾ ಘಟಕದ ಅಧ್ಯಕ್ಷರಾಗಿ, ಅಕ್ಕಮಹಾದೇವಿ ಮಹಿಳಾ ಸಂಘ, ಮಹಿಳಾ ಜಾಗೃತಿ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಸಾರ್ಥಕವಾದಂಥ ಸೇವೆಯನ್ನು ಸಲ್ಲಿಸಿದ್ದರು.
ಜಿಲ್ಲಾ ಕೇಂದ್ರದಲ್ಲಾಗಲಿ ಹೊರಭಾಗದಲ್ಲಿ ಜರುಗುವ ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯ ನಿರ್ವಹಿಸಿದ್ದರು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೇಲೆ ವಿಶೇಷ ಅಭಿಮಾನವನ್ನು ಹೊಂದಿದ್ದನ್ನು ಮರೆಯಲಾಗದು. ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಮಠ ಮಂದಿರಗಳಿಂದ ಗೌರವ ಪ್ರಶಸ್ತಿಯನ್ನು ಪಡೆದವರಾಗಿದ್ದರು.
ಕೊಡುಗೈ ದಾನಿಗಳಾಗಿ ಸಾಮಾಜಿಕ ಕಾರ್ಯಗಳಿಗೆ ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮ ನೀಡಿದ ಶ್ರದ್ಧಾಳುಗಳಾಗಿದ್ದರು. ಅಗಲಿದ ಅವರ ಪವಿತ್ರ ಆತ್ಮಕ್ಕೆ ದಯಾಘನನಾದ ಪರಮಾತ್ಮನು ಚಿರಶಾಂತಿ ನೀಡಲಿ ಮತ್ತು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಅಭಿಮಾನಿ ಬಳಗಕ್ಕೆ ಅನುಗ್ರಹಿಸಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

























Discussion about this post