ಚಿಕ್ಕಮಗಳೂರು: ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ, ಶಿಕ್ಷಣ ಶಿಲ್ಪಿ ಪ್ರಶಸ್ತಿ ಪ್ರಧಾನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರ ಕಾಲದಲ್ಲಿ ಅಂದಿನ ಜನರಲ್ಲಿ ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆ, ಮಾನವೀಯತೆ ಮನೆ ಮಾಡಿತ್ತು. ಅದರಿಂದಾಗಿ ಅಂದು ಸಮಾಜ ಅತ್ಯಂತ ಸುಖಿಯಾಗಿತ್ತು. ಆದರೆ ಇಂದು ವಿಜ್ಞಾನ ಬೆಳೆದಂತೆ ನಮ್ಮಲ್ಲಿ ಅವೆಲ್ಲವೂ ಮರೆಯಾಗುತ್ತಿವೆ. ಸಮಾಜದಲ್ಲಿ ವೃದ್ದಾಶ್ರಮ, ಅನಾಥಾಶ್ರಮಗಳು ಬೆಳೆಯುತ್ತಿವೆ ಎಂದು ವಿಷಾಧಿಸಿದರು.
ಆಧುನಿಕತೆಯ ಭರದಲ್ಲಿ ಹೊಲ, ಗದ್ದೆ, ಜಮೀನು, ಪ್ರೀತಿ, ವಿಶ್ವಾಸ ಮನುಷ್ಯ ಸಂಬಂಧಗಳು ಎಲ್ಲವೂ ವ್ಯಾಪಾರದ ಸರಕಾಗುತ್ತಿವೆ. ನಿಸರ್ಗ, ಸುಂದರ ಪರಿಸರ, ಹಸಿರು ಮಾಯವಾಗಿದೆ. ಇದರಿಂದಾಗಿ ಇಂದು ಬದುಕು ದುಸ್ತರವಾಗಿದೆ ಎಂದು ತಿಳಿಸಿದರು.
ಈ ಸಮಾಜವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಮನುಜ ಮತ ವಿಶ್ವಪಥದ ಸಂದೇಶವನ್ನು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲೆಯ ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್.ಮಹೇಶ್ ಮಾತನಾಡಿ ವೈಜ್ಞಾನಿಕ ಚಿಂತನೆ ಇಂದು ಮರೆಯಾಗುತ್ತಿದೆ. ಶಿಕ್ಷಣವಂತರಲ್ಲೇ ಹೆಚ್ಚಿನ ಮೌಢ್ಯತೆ ಎದ್ದು ಕಾಣುತ್ತಿದ್ದು ವೈಜ್ಞಾನಿಕ ದೃಷ್ಟಿಕೋನವಿಲ್ಲದ ಶಿಕ್ಷಣ ವ್ಯವಸ್ಥೆ ಇದಕ್ಕೆ ಮೂಲಕಾರಣ ಎಂದರು.
ದೇಶದ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಹ ಮೌಢ್ಯಗಳನ್ನು ದೂರ ಮಾಡಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಣ್ಣೆಕೆರೆ ಮಂಜುನಾಥಸ್ವಾಮಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕಳೆದ ೧೦ ವರ್ಷಗಳಿಂದ ಜಿಲ್ಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ|| ಆರ್.ಎನ್.ರಾಜಾನಾಯಕ್ ಉಪನ್ಯಾಸ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಶಿಕ್ಷಕರಿಗೆ ಸಮಾರಂಭದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಶಿಕ್ಷಣ ಶಿಲ್ಪಿ ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಅತ್ಯುತ್ತಮ ಸೇವೆ ಸಲ್ಲಿಸಿದ ೧೬ ಶಿಕ್ಷಕರಿಗೆ ಶಿಕ್ಷಣ ಶಿಲ್ಪಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇತ್ತೀಚೆಗೆ ನಡೆಸಲಾದ ಅಂಚೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಮುಗಳಿಕಟ್ಟೆ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾನೂನು ಸಲಹೆಗಾರ ಸೂರಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ಮೋಹನ್, ತಾಲ್ಲೂಕು ಅಧ್ಯಕ್ಷ ಬಿ.ಎಂ.ಕೃಷ್ಣಮೂರ್ತಿ, ಗೌರವ ಸಲಹೆಗಾರ ಆರ್.ಡಿ.ರವೀಂದ್ರ, ಪುಷ್ಪಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಜೆ.ಜಗದೀಶ್, ಜಿಲ್ಲಾ ಸಂಯೋಜಕಿ ಅನಿತಾ, ತಾಲ್ಲೂಕು ನಿರ್ದೇಶಕ ಮೋಹನ್ ಉಪಸ್ಥಿತರಿದ್ದರು.

























Discussion about this post