ಚಿಕ್ಕಮಗಳೂರು: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಎಂದು ಲಯನ್ ಕ್ಲಬ್ ಅಧ್ಯಕ್ಷ ಬಿ.ಎನ್.ವೆಂಕಟೇಶ್ ಹೇಳಿದರು.
ನಗರದ ಲಕ್ಷ್ಮೀಶನಗರದ ಗಾಂಧಿ ಪಾರ್ಕ್‌ನಲ್ಲಿ ಭಾನುವಾರ ಗಾಂಧಿ ಜಯಂತಿ ಪ್ರಯುಕ್ತ ಲಯನ್ ಪದಾಧಿಕಾರಿಗಳು ಹಾಗೂ ಸ್ಥಳೀಯರು ಸಾಮೂಹಿಕ ಶ್ರಮದಾನ ಮಾಡುವ ಮೂಲಕ ಸ್ವಚ್ಚತಾ ಕಾರ್ಯವನ್ನು ಮಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದ್ದು ಗಿಡ-ಮರಗಳನ್ನು ಬೆಳೆಸುವು ದರಿಂದ ಸಕಾಲಕ್ಕೆ ಮಳೆ, ಶುದ್ಧ ಗಾಳಿ ಸಿಗುವ ಜೊತೆಗೆ ಭೂಮಿಯ ಉಷ್ಣತೆ ಸಮತೋಲನವಾಗುತ್ತದೆ. ಹೆಚ್ಚಿನ ಉಷ್ಣತೆಯಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದರು. ತಮ್ಮ ಮನೆ, ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ ಎಂದರು.
ಜೀವ ಸಂಕುಲಗಳ ಬದುಕಿನೊಂದಿಗೆ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ವ್ಯಾಪಕವಾಗಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಹಳ್ಳಿಕಾರರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಮಾತನಾಡಿ ಮನುಷ್ಯ ತನ್ನ ದುರಾಸೆಗೆ ಬಲಿಯಾಗಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಐಷರಾಮಿಯಾಗಿ ಬಾಳಬೇಕು ಎಂಬ ಭ್ರಮೆಯಲ್ಲಿ ಮುಳುಗಿ ಅಭಿವೃದ್ಧಿಯ ಬೆನ್ನು ಹತ್ತಿ ಪರಿಸರ ವಿನಾಶಕ್ಕೆ ಕಾರಣನಾಗಿದ್ದಾನೆ. ಅನೈರ್ಮಲ್ಯ ದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮನೆಯ ಸುತ್ತಮುತ್ತಲಿನ ಚರಂಡಿ, ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕು ಎಂದರು.
ಕ್ಲಬ್‌ನ ಸದಸ್ಯ ಕೆ.ಡಿ.ಪುಟ್ಟಣ್ಣ ಮಾತನಾಡಿ ಭೂಮಿಯ ಫಲವತ್ತತೆ ಹಾಳು ಮಾಡುವ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮನೆಗಳ ತೊಟ್ಟಿ, ಡ್ರಮ್ ಮತ್ತಿತರ ಕಡೆಗಳಲ್ಲಿ ಹೆಚ್ಚು ಕಾಲ ನೀರು ಸಂಗ್ರಹಿಸುವುದರಿಂದ ಮಲೇರಿಯಾ, ಡೆಂಗ್ಯೂ, ಮುಂತಾದ ಕಾಯಿಲೆಗಳು ಹರಡುವ ಸಂಭವವಿದೆ ಈ ನಿಟ್ಟಿನಲ್ಲಿ ಜಾಗೃತಿ ವಹಿಸಿ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲಯನ್ ಕ್ಲಬ್ ಕಾರ್ಯದರ್ಶಿ ದಯಾಶಂಕರ್, ಖಜಾಂಚಿ ಸಿ.ಎನ್.ಕುಮಾರ್, ಸದಸ್ಯ ಸದಸ್ಯರಾದ ಎಂ.ಆರ್.ಕೇಶವಮೂರ್ತಿ, ನೇತ್ರಾ ವೆಂಕಟೇಶ್, ಸ್ಥಳೀಯ ಗಂಗಾಧರ್‌ರಾಜ್ ಅರಸ್, ಬಾಬು, ಹಳ್ಳಿಕಾರ ಯುವಕ ಸಂಘದ ನಿರ್ದೇಶಕ ಶ್ರೀನಿವಾಸ್, ನಗರ ಪೌರಕಾರ್ಮಿಕರು ಭಾಗವಹಿಸಿದ್ದರು.

























Discussion about this post