ಚಿಕ್ಕಮಗಳೂರು ನಗರದ ಜನ ಕಂಟಕಗಳಿಂದ ಹೊರಬರುವ ಯಾವುದೇ ಸೂಚನೆಗಳು ಕಾಣುತ್ತಿಲ್ಲವಲ್ಲ ಎಂಬ ಬೇಸರ ದೊಂದಿಗೆ,ಚಿಕ್ಕಮಗಳೂರಿಗೆ ಬರಲಿರುವ ಪಾರ್ಕಿಂಗ್ ಶುಲ್ಕದ ಬಗ್ಗೆ ಕೆಲವು ವಿಚಾರವನ್ನು ತಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
ಕಳೆದ ಆರೇಳು ವರ್ಷಗಳಿಂದ ಸಾಗುತ್ತಲೇ ಇರುವ ಹಲವು ಕೋಟಿಗಳ ಕಾಮಗಾರಿ ಒಳಚರಂಡಿ(ಯುಜಿಡಿ) ವ್ಯವಸ್ಥೆ ಇನ್ನೂ ಸಂಪೂರ್ಣವಾಗಿ ಮುಗಿಯಲೇ ಇಲ್ಲ. ಇನ್ನೂ ಅಮೃತ್ ಯೋಜನೆ ಹೆಸರಲ್ಲಿ ನೀರು ಕುಡಿಯಲು ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಈ ಮಧ್ಯೆ ಪಾರ್ಕಿಂಗ್ ಶುಲ್ಕ ತೆರಬೇಕಾದ ಅನಿವಾರ್ಯತೆ ಬಂದೊದಗಿದೆ.
ಮಲೆನಾಡು ಜಿಲ್ಲೆಯ ಕೇಂದ್ರ ಚಿಕ್ಕಮಗಳೂರು ನಗರದಲ್ಲಿ ಇರುವುದು ಮೂರೇ ಮೂರು ಮುಖ್ಯರಸ್ತೆಗಳು. ಇಂದಿರಾಗಾಂಧಿ (ಐಜಿ)ರಸ್ತೆ, ಮಹಾತ್ಮಗಾಂಧಿ (ಎಂಜಿ)ರಸ್ತೆ ಹಾಗೂ ಮಾರ್ಕೆಟ್ (ಡಾ. ಅಂಬೇಡ್ಕರ್) ರಸ್ತೆಗಳು.
ಎಂಜಿ ರಸ್ತೆಯಂತೂ ಈಗಾಗಲೇ ಒಮ್ಮುಖ ರಸ್ತೆಯಾಗಿ ಪರಿವರ್ತನೆಗೊಂಡಿದೆ. ಇನ್ನು ಐಜಿ ರಸ್ತೆಗೆ ಅವೈಜ್ಞಾನಿಕ ವಿಭಜಕ ಅಳವಡಿಸಿ ಒಮ್ಮುಖ ರಸ್ತೆಗಳನ್ನಿಗಿ ಮಾಡಲಾಗಿದೆ. ಈ ರಸ್ತೆಗಳ ಟ್ರಾಫಿಕ್ ಪರಿಹಾರಕ್ಕೆ ಅದೇನೋ ಶುಲ್ಕ ಹಾಕುವ ಒಂದೆಡೆ ವಾಹನಗಳನ್ನು ನಿಲ್ಲಿಸಿ ನಡೆದು ಹೋಗುವುದೇ ಪರಿಹಾರ ಎಂದು ನಗರಸಭೆ ತಿಳಿದಂತಿದೆ. ಏನಿದು ಈ ಬಗ್ಗೆ ತಿಳಿಯೋಣ ಬನ್ನಿ.
ಕಳೆದ ಒಂದು ವಾರದ ಹಿಂದೆ ಬಸ್ ಸ್ಟ್ಯಾಂಡ್ ಬಳಿ, ಹಳೆಯ ಸಿಂಡಿಕೇಟ್ ಬ್ಯಾಂಕ್ ಮತ್ತು ಅಲ್ಲಲ್ಲಿ ಕೆಂಪು ಅಕ್ಷರದ ಫ್ಲೆಕ್ಸ್ ಅಳವಡಿಸಲಾಗಿತ್ತು. ಇನ್ನು ಮುಂದೆ ಐಜಿ ರಸ್ತೆಯ ಎರಡು ಬದಿಗಳಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸುವಂತಿಲ್ಲ. ಅದಕ್ಕಾಗಿ ಹಳೆಯ ಜೈಲ್ ಕಾಂಪೌಂಡ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಇದನ್ನು ಕಡ್ಡಾಯವಾಗಿ ಜಾರಿಗೊಳಿಸತಕ್ಕದ್ದು ಎಂಬ ಪಲಕ ಕಂಡ ನಗರದ ಬಹುತೇಕರು,ರಸ್ತೆ ಅಂಗಡಿ ಮುಗ್ಗಟ್ಟುಗಳು, ವಾಣಿಜ್ಯ ಸಂಸ್ಥೆ, ಬ್ಯಾಂಕ್ ಗಳವರು ಎಲ್ಲರ ಬಾಯಲ್ಲಿ ಒಂದೇ ಮಾತು! ಇದೇನಿದು ಹೇಗೆ ಸಾಧ್ಯ ,ಒಂದು ಕಡೆ ಗಾಡಿ ನಿಲ್ಲಿಸಿ ಬರಲು ಸಾಧ್ಯವೇ ವಯಸ್ಸಾದವರು, ಅನಾರೋಗ್ಯದವರು ಬ್ಯಾಂಕು, ಆಸ್ಪತ್ರೆ ಅಂಗಡಿ ಹೋಟೆಲ್ ಗಳಿಗೆ ಹೋಗುವುದು ಹೇಗೆ ? ಸಾಧ್ಯವಿಲ್ಲವೆಂದು. ಈ ಚರ್ಚೆ ಮಧ್ಯೆ ನನಗೆ ಕಾಡತೊಡಗಿತು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಎಂಬ ಗೊಂದಲ.
ಐಜಿ ರಸ್ತೆಯ ವರ್ತಕರು ಹಲವು ಜನಪರ ಹೋರಾಟಗಾರರು ಎಸ್ಪಿ ಹಾಗೂ ಡಿಸಿ ಅವರನ್ನು ಕಂಡು ಏನಿದು ಅನ್ಯಾಯ ಹೀಗೆಲ್ಲ ಮಾಡಬೇಡಿ ಎಂದು ಮನವಿ ಮಾಡಿದರು, ಹೀಗಾಗಿ ಸದ್ಯ ಜಾರಿಗೊಂಡಿಲ್ಲ ಎಂದು ಜನ ಮಾತನಾಡಿ ಕೊಳ್ಳತೊಡಗಿದ್ದಾರೆ. ಆದರೆ ಟ್ರಾಫಿಕ್ ಪೊಲೀಸರ ಪ್ರಕಾರ ಇದೊಂದು ತಾತ್ಕಾಲಿಕ ತಡೆ. ಆಗಿದ್ದರೆ ಬೋರ್ಡ್ ಗಳನ್ನು ತೆಗೆದು ಬೇಕಿತ್ತು.ಒಂದಲ್ಲ ಒಂದು ದಿನ ನಾಲ್ಕು ಚಕ್ರ ವಾಹನಗಳ ನಿಲ್ಲಿಸದಿರುವ ತೀರ್ಮಾನ ಜಾರಿ ಆಗುತ್ತೆ ಅನ್ನುತ್ತಾರೆ.
ಈ ಗುಂಗು ಮುಗಿಯುವ ಮುನ್ನವೇ ಪತ್ರಿಕೆಯಲ್ಲಿ ಎಂಜಿ ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ಟೆಂಡರ್ ಹರಾಜು ಪ್ರಕಟಣೆಯನ್ನು ಕಂಡು ಹುಬ್ಬೇರಿಸಿದೆ. 1ನೇ ನವೆಂಬರ್2021ರಿಂದ 31-3-2022 ರವರೆಗೆ ಎಂಜಿ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಶುಲ್ಕ ನಿಗದಿ ಮಾಡಲಾಗುವುದು ಇದಕ್ಕಾಗಿ 10.79 ಲಕ್ಷ ಅಂದಾಜು ಮೊತ್ತದ ಟೆಂಡರ್ ಕರೆಯಲಾಗಿದೆ ಈ ತಿಂಗಳ 27ರಂದು ಹರಾಜು ನಡೆಸಲಾಗುವುದೆಂದು ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಕೆ ಎನ್ ರಮೇಶ್ ನಗರಸಭೆ ಆಯುಕ್ತರಾದ ಬಿ ಸಿ ಬಸವರಾಜು ಅವರುಗಳ ಸಹಿ ಪ್ರಕಟಣೆ ಬಿತ್ತರಗೊಂಡಿದೆ.
ಪ್ರಕಟಣೆ ಪ್ರಕಾರ ಬೆಳಿಗ್ಗೆ 8 ರಿಂದ ರಾತ್ರಿ 9.00 ರವರೆಗೆ ಮೊದಲ ಒಂದು ಗಂಟೆಗೆ 10ರೂ, ನಂತರದ ಪ್ರತಿ ಎರಡು ಗಂಟೆಗೆ 5 ರೂ,24 ಗಂಟೆ 40 ರೂ ಹಾಗೂ ತಿಂಗಳಿಗೆ 1500 ರೂಪಾಯಿಗಳು.ಮತ್ತು ರಾತ್ರಿ 9:00 ರಿಂದ ಬೆಳಿಗ್ಗೆ 8:00 ರವರೆಗೆ ಮೊದಲ ಎರಡು ಗಂಟೆಗೆ 5ರೂ, ನಂತರದ ಪ್ರತಿ ಎರಡು ಗಂಟೆಗೆ 5 ರೂಪಾಯಿ ನಾಲ್ಕು ಚಕ್ರ ವಾಹನಗಳ ನಿಲುಗಡೆ ಶುಲ್ಕ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ನಗರಸಭೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲ.ಅಧಿಕಾರಿಗಳು ಅಥವಾ ಅವರ ಹಿಂದಿರುವ ಕಾಣದ ಕೈಗಳು ಅಧಿಕಾರ ನಡೆಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.ಇಂತಹ ಸಂದರ್ಭವನ್ನು ಬಳಸಿಕೊಂಡು ಜನವಿರೋಧಿ ತೀರ್ಮಾನಗಳಿಗೆ ನಗರಸಭೆ ಮುಂದಾಗಿರುವುದು ಸುತಾರಾಂ ಸರಿಯಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಕಂಡರೆ ಮತ್ತು ಒಂದೊಮ್ಮೆ ಈ ಪ್ರಯೋಗ ಜಾರಿಯಾದಲ್ಲಿ ಇಂದು ನಾಲ್ಕು ಚಕ್ರ, ನಾಳೆ ದಿನ ದ್ವಿಚಕ್ರ ಮತ್ತೊಂದು ದಿನ ಪಾದಚಾರಿಗಳಿಗೂ ಶುಲ್ಕ ನಿಗದಿ ಪಡಿಸುವುದರಲ್ಲಿ ಎರಡು ಮಾತಿಲ್ಲ.
ಇಷ್ಟೆಲ್ಲಾ ಮಾಡಲು ಹೊರಟಿರುವ ನಗರಸಭೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಈ ರಸ್ತೆಗಳ ಪಕ್ಕದಲ್ಲಿ ಜನರು ಓಡಾಡುವ ಪಾರ್ಕಿಂಗ್ ವ್ಯವಸ್ಥೆ ಇದೆಯಾ( ಅಂಗಡಿ-ಮುಗ್ಗಟ್ಟುಗಳು ನುಂಗಿ ಹಾಕಿವೆ) ಕೆಲವೆಡೆ ಇ ಗುಂಡಿ ಬಿದ್ದಿವೆ. ಜನರೆಲ್ಲಾ ರಸ್ತೆಯಲ್ಲಿ ಓಡಾಡುವ ಸ್ಥಿತಿ ಬಂದಿದೆ. ಈ ಮೂರು ಮುಖ್ಯರಸ್ತೆಗಳು ಸೇರಿ ಹಲವು ಕಿಲೋಮೀಟರ್ ಗಟ್ಟಲೆ ಇದ್ದರೂ ಕೇವಲ ಅಜಾದ್ ಪಾರ್ಕ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಮಾತ್ರ ಎರಡು ಸಾರ್ವಜನಿಕ ಶೌಚಾಲಯಗಳಿವೆ ಇವು ಸಾಕೆ ? ಹನುಮಂತ ವ್ರತ್ತ ಹಾಗೂ ಎಂಎಂಸಿ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಗಳು ಕೆಲಸ ಮಾಡುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಲು
ಬಣ್ಣದ ಗೆರೆಗಳಿಲ್ಲ.ವಾಹನ ಸವಾರರು ಎಲ್ಲೆಂದರಲ್ಲಿ ಎರಡು ಕಾರುಗಳ ನಿಲ್ಲುವ ಜಾಗದಲ್ಲಿ ಒಂದೊಂದು ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಟ್ರಾಫಿಕ್ ಪೊಲೀಸರಂತೂ ವಾಹನ ಸವಾರರನ್ನು ಬಂಡುಕೋರ ರಂತೆ ನೋಡುತ್ತಾರೆ. ಪ್ರವಾಸಿಗರಂತೂ ಹಿಡಿಶಾಪ ಹಾಕುತ್ತಿದ್ದಾರೆ.ಇವೆಲ್ಲವನ್ನೂ ಸರಿಪಡಿಸುವ ಬದಲು ನಿಲುಗಡೆ ಶುಲ್ಕ ನಿಗದಿಪಡಿಸಿದರೆ ಟ್ರಾಫಿಕ್ ಸಮಸ್ಯೆ ಸರಿಯಾಗುವುದೇ?
ನಗರದ ಜನ ಮಾತನಾಡತೊಡಗಿದ್ದಾರೆ ನಾವು ನಗರಸಭೆಗೆ ಟ್ಯಾಕ್ಸ್ ಕಟ್ಟವುದು ಯಾತಕ್ಕಾಗಿ ನಗರಸಭೆ ನೀರು ರಸ್ತೆ ನೈರ್ಮಲ್ಯ ಗಳನ್ನು ಕೊಡಬೇಕು ಎನ್ನುವ ಕಾರಣಕ್ಕೆ. ರಸ್ತೆಯಂತೂ ಇಲ್ಲವೇ ಇಲ್ಲ ಬಿಡಿ, ನೀರಿಗಾಗಿ ಅಮೃತ್ ಯೋಜನೆ ಮುಗಿದ ಮೇಲೆ ನೋಡಬೇಕು. ಇನ್ನೂ ನೈರ್ಮಲ್ಯಕ್ಕಾಗಿ ಗಂಟೆ ಗಾಡಿಗೆ ಜನ ಹಣ ತೆರಬೇಕು.
ಇದೆಲ್ಲಾ ಆಗುತ್ತಿರುವುದು ಏಕೆ ಎಂಬುದು ಜನರಿಗೆ ಗೊತ್ತಿಲ್ಲದ ವಿಚಾರವೇನಲ್ಲ, ಆದರೂ ಎಲ್ಲವನ್ನೂ ಸಹಿಸಿಕೊಂಡು ಹೋಗುವ ಅನಿವಾರ್ಯತೆಯಲ್ಲಿದ್ದಾರೆ. ಸತ್ಯವನ್ನು ಹೊರಹಾಕಲು ಪ್ರಶ್ನಿಸಲು ಆಗದಿರುವ ಬಗ್ಗೆ ಆಡಳಿತಾರೂಢ ಕೆಲವು ಜನಪ್ರತಿನಿಧಿಗಳು ಮತ್ತು ಮುಖಂಡರುಗಳೂ ಕೂಡ ಗೊಣಗುವುದನ್ನು ಕೇಳಿದ್ದೇನೆ.
ಅದು ಬೇರೆ ಮಾತು ಬಿಡಿ ಆದರೆ ನಗರದ ಜನ ನಗರಸಭೆ ಮತ್ತು ಜಿಲ್ಲಾಡಳಿತದ ಇಂತಹ ಏಕಾಭಿಪ್ರಾಯ ಮತ್ತು ಅಧಿಕಾರಶಾಹಿ ತೀರ್ಮಾನಗಳನ್ನು ಪ್ರಶ್ನಿಸಬೇಕಾಗುತ್ತದೆ ಅಲ್ಲವೇ ?
ಎಂಸಿ ಶಿವಾನಂದಸ್ವಾಮಿ ಚಿಕ್ಕಮಗಳೂರು
94481 33109.

























Discussion about this post