ಚಿಕ್ಕಮಗಳೂರು: ದಿನಗಳಿಂದ ರಸ್ತೆಯ ಬದಿಯಲ್ಲಿದ್ದ ಅನಾಥ ತಾಯಿ ಹಾಗೂ ಮಗುವಿನ ರಕ್ಷಣೆ ಮಾಡಲಾಯಿತು ಎಂದು ಬೇತೆಲ್ ಟ್ರಸ್ಟ್ ನಿರಾಶ್ರಿತರ ಕೇಂದ್ರದ ಅಧ್ಯಕ್ಷ ರೂಬೆನ್ ಮೊಸಸ್ ತಿಳಿಸಿದ್ದಾರೆ.
ಮಲ್ಲಂದೂರು ರಸ್ತೆಯಲ್ಲಿರುವ ಉಷಾ ಲಾಡ್ಜ್ ಚರಂಡಿ ಪಕ್ಕದಲ್ಲಿ ಹಲವು ದಿನಗಳಿಂದ ದಿಕ್ಕು ದೆಸೆ ಇಲ್ಲದೆ ಅನಾಥವಾಗಿ ಬಿದ್ದಿದ್ದ ತಾಯಿ ಹಾಗೂ ಮಗುವಿನ ಬಗ್ಗೆ ಸ್ನೇಹಿತರೊಬ್ಬರು ಕರೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ರಕ್ಷಣೆ ಮಾಡಿ ಅನಾರೋಗ್ಯದಲ್ಲಿ ಹಾಗೂ ಪಾನಮತ್ತಳಾಗಿದ್ದ ತಾಯಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು ಎಂದಿದ್ದಾರೆ.
ಸಣ್ಣ ವಯಸ್ಸಿನ 7 ವರ್ಷದ ಮಗುವಿನ ತಲೆಯ ಕೂದಲು ಕತ್ತರಿಸಲು ಮುಂದಾದಾಗ ತಲೆ ತುಂಬಾ ಕೂದಲು ಕೂದಲು ತುಂಬಾ ಹೇನುಗಳು ತುಂಬಿ ತುಳುಕುತ್ತಿದ್ದವು, ಇದರಿಂದ ಕೂದಲು ಕತ್ತರಿಸದೆ ತಲೆ ಬೋಳಿಸ ಬೇಕಾಯಿತು. ಮಗು ಗಂಡು ಎಂದು ತಾಯಿ ಮಗು ಇಬ್ಬರೂ ಹೇಳಿದ್ದರೂ, ಆದರೆ ಬಟ್ಟೆ ಬಿಚ್ಚಿ ಸ್ನಾನ ಮಾಡಿಸಲು ಮುಂದಾದಗಲೆ ಮಗು ಗಂಡಲ್ಲ ಹೆಣ್ಣು ಎಂದು ತಿಳಿಯಿತು.
ಕುಮಾರಿ ಎಂಬ 22 ವಯಸ್ಸಿನ ಹುಡುಗಿ ಸಣ್ಣ ವಯಸ್ಸಿನಲ್ಲೇ ಕಡೂರು ಬಿಟ್ಟು ಚಿಕ್ಕಮಗಳೂರಿಗೆ ಬಂದು ಅಲ್ಲಿ ಇಲ್ಲಿ ಬೀದಿ ಸುತ್ತುತ್ತ ಚಿಂದಿ ಆಯುತ್ತಿದ್ದ ಸಂದರ್ಭದಲ್ಲಿ ಹುಡುಗನೊಬ್ಬನ ಪರಿಚಯವಾಗಿ ಆ ಪರಿಚಯ ಪ್ರೇಮಕ್ಕೆ ತಿರುಗಿ ಆ ಪ್ರೇಮದ ಫಲವೇ ಈ ಪುಟ್ಟ ಹುಡುಗಿ ವಿಪರ್ಯಾಸವೆಂದರೆ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಗಂಡ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಕುಮಾರಿ ತಿಳಿಸಿರುತ್ತಾರೆ.
ಕೆಲವು ತಂದೆ ತಾಯಿಗಳು ಮಾಡುವ ತಪ್ಪಿನಿಂದಾಗಿ ಇಂತಹ ಸಣ್ಣ ಮಕ್ಕಳು ಬೀದಿಪಾಲಾಗುತ್ತವೆ ಅದರಲ್ಲೂ ಇಂತಹ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುತ್ತಿರುವುದನ್ನು ನೋಡುತ್ತಲೆ ಇದ್ದೇವೆ ಈ ಮಗುವಿಗೆ ಅಂತಹ ಕೆಟ್ಟ ಪರಿಸ್ಥಿತಿ ಬರಬಾರದೆಂಬ ಉದ್ದೇಶದಿಂದ ಆ ಮಗುವಿನ ಹಳೆಯ ಗೆಟಪ್ ಬದಲಿಸಿ ಸೂಕ್ತ ಸ್ಥಳಕ್ಕೆ ಬಿಡಲಾಗಿದ್ದು, ಆಕೆಗೆ ಮುಂದೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಆರ್ ಎಂ ಓ. ಡಾ.ಕಲ್ಪನ, ಸವಿತಾ, ಸಹನಾ ರೂಬೆನ್, ಅರುಂಧತಿ, ಪವಿತ್ರ, ರೇಣುಕಾ, ಶೋಭಾ, ನಿರಾಶ್ರಿತರ ಕೇಂದ್ರದ ಸವಿತಾ, ನಗರಸಭೆಯ ವಾಹನ ಚಾಲಕ ರವಿ ಸಹಕರಿಸಿರುತ್ತಾರೆ.
ಇಂತಹ ವ್ಯಕ್ತಿಗಳಿದ್ದರೆ ದಯಮಾಡಿ 7411749728 ಈ ಮೊಬೈಲ್ ಸಂಖ್ಯೆಗೆ ಕರೆಮಾಡಲು ಕೋರಿದ್ದಾರೆ.

























Discussion about this post