ಚಿಕ್ಕಮಗಳೂರು: ಕಾಂಗ್ರೆಸ್‌ನಲ್ಲಿ ಅಭಿವ್ಯಕ್ತಿ ಸ್ವತಂತ್ರಕ್ಕೆ ಬೆಲೆ ಇದೆ. ಆದರೆ, ಬಿಜೆಪಿಯಲ್ಲಿ ಅಭಿವ್ಯಕ್ತಿ ಸ್ವತಂತ್ರಕ್ಕೆ ಬೆಲೆ ಇಲ್ಲ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.
ನಗರದ ಕೋಟೆ ವಾರ್ಡಿನಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಸಂಯುಕ್ತವಾಗಿ ಆಯೋಜಿಸಿದ್ದ ಮಹತ್ಮಾ ಗಾಂಧಿ ಗ್ರಾಮ ಸ್ವರಾಜ್ ಅಭಿಯಾನ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ವೈಖರಿ ಗಮನಿಸಿದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಬಿಜೆಪಿಯದ್ದ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಟೀಕಿಸಿದರು.
ದೇಶ ರಕ್ಷಣೆ ಮಾಡುವ ಬದಲು ಬಿಜೆಪಿ ಆಡಳಿತ ವ್ಯವಸ್ಥೆ ಲೂಟಿ ಮಾಡುತ್ತಿದೆ. ಅವರು ಲೂಟಿಗಾಗಿಯೇ ಅಧಿಕಾರಕ್ಕೆ ಬಂದಿದ್ದಾರೆ. ಈ ದೇಶದಲ್ಲಿ ಮೋದಿ ಮತ್ತು ಅಮಿತ್ ಷಾ ದನಗಳಿದ್ದಂತೆ. ಅವುಗಳು ಎಲ್ಲಂದರಲ್ಲಿ ಮೇಯ್ದು ಸಗಣಿ ಹಾಕುತ್ತಿವೆ. ಅದನ್ನು ರವಿಯಂತವರು ಬಾಚುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ವಿರೋಧ ಪಕ್ಷದ ನಾಯಕ ಸ್ಥಾನ ಪುಟಗೋಸಿ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ ಅವರ ತಂದೆ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಪುಟುಗೊಸಿಯೇ ಎಂದು ಪ್ರಶ್ನೆ ಎಸೆದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ ಮಾತನಾಡಿ, ದೇಶದಲ್ಲಿ ಬಿಜೆಪಿ ದುರಾಡಳಿತದಿಂದಾಗಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಡ್ಡಡ ಸಾಮಗ್ರಿ ಬೆಲೆಗಳು ದುಬಾರಿಯಾಗಿ ಜನರು ಅನೇಕ ರೀತಿಯಲ್ಲಿ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಈ ಎಲ್ಲಾ ವಿಚಾರಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ವೆಂಕಟೇಶ್ ಮಾತನಾಡಿ, ಬೆಲೆ ಏರಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ದೇಶದಲ್ಲಿ ಬಿಜೆಪಿ ಸರ್ಕಾರಗಳು ಪ್ರಜಾಪ್ರಭುತ್ವಕ್ಕೆ ದಕ್ಕೆಯುಂಟು ಮಾಡುತ್ತಿವೆ. ಮಹತ್ಮಾ ಗಾಂಧಿ ಆದರ್ಶಗಳೊಂದಿಗೆ ಪಕ್ಷವನ್ನು ಸಂಘಟಿಸಬೇಕು. ಜನರು ಈಗಾಗಲೇ ಆಳುವ ಪಕ್ಷಗಳ ಬಗ್ಗೆ ಬೇಸತ್ತು ಹೋಗಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದು, ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ನಾವು ಅದಕ್ಕೆ ತಕ್ಕಂತೆ ಸ್ಪಂದಿಸಬೇಕು ಎಂದರು.
ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ದೇಶದಲ್ಲಿ ಬಿಜೆಪಿ ಜನರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ. ಭ್ರಷ್ಟಾಚಾರ ವ್ಯಾಪಿಸಿ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬಿಜೆಪಿಯ ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರೀತಿ, ನಂಬಿಕೆಯೊಂದಿಗೆ ಪಕ್ಷವನ್ನು ಸಂಘಟಿಸಬೇಕು. ಬಿಜೆಪಿಯನ್ನು ತೊಲಗಿಸಿ ಜನರನ್ನು ಸಮಸ್ಯೆಗಳಿಂದ ಪಾರು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಸಂಘಪರಿವಾರದವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆದು ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಗಾಂಧಿಯನ್ನು ಹತ್ಯೆ ಮಾಡಿರುವ ಗೂಡ್ಸೆ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಮಹತ್ಮಾ ಗಾಂಧಿ ಅವರ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಲು ಯತ್ನಿಸಿರುವ ಸಂಘ ಪರಿವಾರದವರ ಕುಚೋದ್ಯಗಳನು ಮೆಟ್ಟಿ ನಿಲ್ಲಲು ಮಹತ್ಮಾ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಕೆಪಿಸಿಸಿ ನಿರ್ದೇಶನದಂತೆ ಮತ್ತು ಜಿಲ್ಲಾ ಕಾಂಗ್ರೆಸ್ ಸಲಹೆ, ಸೂಚನೆಗಳಂತೆ ಬ್ಲಾಕಿನ ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರಸಭೆಯ ವಾರ್ಡುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಉತ್ತಮ ಸ್ಪಂದನೆ ಕಾರ್ಯಕ್ರಮಕ್ಕೆ ದೊರೆಯುತ್ತಿದೆ ಎಂದು ವಿವರಿಸಿದರು.
ನಗರಸಭೆ ಮಾಜಿ ಸದಸ್ಯ ಯತಿರಾಜ್ ನಾಯ್ಡು ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ವಿನಯಕುಮಾರ್ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಜಿಲ್ಲಾ ಎಸ್ಸಿ ಘಟಕ ಪ್ರಧಾನ ಕಾರ್ಯದರ್ಶಿ ಎಚ್.ಎನ್.ಸುರೇಶ್, ನಗರ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಎಚ್.ಎಸ್.ಜಗದೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಗಂಗಾಧರ್, ಕಾರ್ಯದರ್ಶಿ ಸೃದೀಪ್, ನಾಗಭೂಷಣ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ನಾಗೇಶ್, ಹಿರಿಯ ಮುಖಂಡ ವಿಶ್ವನಾಥ್, ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಚಿದಾನಂದ್, ಕಾರ್ಯದರ್ಶಿ ಮೋಹನ್, ಪ್ರಕಾಶ್ ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾದಳ ಮಾಜಿ ಅಧ್ಯಕ್ಷ ಕೋಟೆ ಆನಂದ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

























Discussion about this post