ಹಿಮಾಚಲ ಪ್ರದೇಶದ ಗಿರಿಕಂದರದಲ್ಲಿ ಚಾರಣದ ಸಾಹಸಕ್ಕೆ ಹೋಗಿದ್ದವರಲ್ಲಿ ಮೂವರು ತೀವ್ರ ಹಿಮಪಾತದಿಂದ ಸಾವನ್ನಪ್ಪಿದ್ದಾರೆ. 10 ಮಂದಿಯನ್ನು ರಕ್ಷಿಸಲಾಗಿದೆ.
ಶಿಮ್ಲಾ: ಗಿರಿಕಂದರಗಳಲ್ಲಿ ಚಾರಣ ಮಾಡುವುದು ಚೇತೋಹಾರಿ ಅನುಭವ. ಆದರೆ, ಪ್ರಕೃತಿ ಮುನಿಸಿಕೊಂಡರೆ ಚಾರಣ ಭಯಾನಕ ಆಗುತ್ತದೆ. ಇಂಥದ್ದೇ ದುರ್ಘಟನೆಯೊಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದೆ. ಚಾರಣಕ್ಕೆ ತೆರಳಿದ್ದ 13 ಜನರ ತಂಡ ಹಿಮಪಾತದ ಹೊಡೆತಕ್ಕೆ ಸಿಲುಕಿತು. ಇದರಿಂದ ಮೂವರು ದುರ್ಮರಣವನ್ನಪ್ಪಿದ್ದು, 10 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಮಹಾರಾಷ್ಟ್ರದ 12 ಮಂದಿ ಓರ್ವ ಪಶ್ಚಿಮ ಬಂಗಾಳ ಮೂಲದವ ಸೇರಿ 13 ಜನರ ತಂಡ ಅ.17ರಂದು ಕಿನ್ನೌರ್ ಜಿಲ್ಲೆಯ ರೋಹ್ರುನಿಂದ ಬುರುವಾಗೆ ಚಾರಣ ಕೈಗೊಂಡಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಈ ತಂಡ 15 ಸಾವಿರ ಅಡಿ ಎತ್ತರದ (ಸಮುದ್ರ ಮಟ್ಟದಿಂದ) ಬುರುವಾ ಕಂಡಾ ಶಿಖರದಲ್ಲಿ ಸಿಲುಕುವಂತಾಯಿತು.
ಹಿಮಪಾತ ತೀವ್ರಗೊಂಡು ತಂಡದ ಸದಸ್ಯರು ಚದುರಿದರು. ಮೂವರು ಸಾವನ್ನಪ್ಪಿದರು ಎಂದು ರಕ್ಷಣಾ ಕಾರ್ಯ ನಡೆಸಿದ 10 ಜನರನ್ನು ಕರೆತಂದ ಭಾರತ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಯೋಧರು ಹೇಳಿದ್ದಾರೆ. ಸಾವನ್ನಪ್ಪಿದರನ್ನು ರಾಜೇಂದ್ರ ಪಾಠಕ್, ಅಶೋಕ್ ಭಾಲೆ ರಾವ್, ದೀಪಕ್ ರಾವ್ ಎಂದು ಗುರುತಿಸಲಾಗಿದೆ.
ಉತ್ತರಾಖಂಡದಲ್ಲಿ ಕಳೆದ ವಾರ ಇಂಥದ್ದೆ ದುರ್ಘಟನೆ ಜರುಗಿತ್ತು. 11 ಜನರ ಚಾರಣಿಗರ ತಂಡ ಉತ್ತರಕಾಶಿ ಜಿಲ್ಲೆಯ ಹರ್ಶಿಲ್ನಿಂದ ಕಿನ್ನೌರ್ ಜಿಲ್ಲೆಯ ಚಿತ್ಕುಲ್ಗೆ ಚಾರಣ ನಡೆಸುತ್ತಿದ್ದಾಗ ಲಂಖಾಗ ಪಾಸ್ನಲ್ಲಿ ಹಿಮಪಾತಕ್ಕೆ ಸಿಲುಕಿ ಮಾರ್ಗ ತಪ್ಪಿಸಿಕೊಂಡಿತು. ಐವರು ಚಾರಣಿಗರು ಸಾವನ್ನಪ್ಪಿದ್ದರು.

























Discussion about this post