ಶೃಂಗೇರಿ: ‘ಕಳೆದ ಸುಮಾರು ವರ್ಷಗಳಿಂದ ರೈತರಿಗೆ ವಿರುದ್ಧವಾದ ನೀತಿ ಇರಲಿಲ್ಲ. ಮಲೆನಾಡಿನ ಕೃಷಿಕರಿಗೆ ಕೃಷಿ ಎಂಬುದು ಸಂಸ್ಕೃತಿ. ಅವರ ವಿರುದ್ಧ ಕಾಯ್ದೆಗಳನ್ನು ತಂದ ಸರ್ಕಾರವು ರೈತ, ದಲಿತ ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ತಂದು ಅವರೆಲ್ಲರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ನಿವೃತ್ತ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ಆರೋಪಿಸಿದರು.
ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಸಂಯುಕ್ತ ರೈತ-ಕಾರ್ಮಿಕ ಒಕ್ಕೂಟ ವತಿಯಿಂದ ಆಯೋಜಿಸಿದ, ರೈತ-ಕಾರ್ಮಿಕರ ವಿರುದ್ಧ ಹೋರಡಿಸಿದ ನೀತಿಯನ್ನು ಖಂಡಿಸಿ ವಿಚಾರ ಸಂಕೀರ್ಣ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.
‘ಭೂಸುಧರಣಾ ಕಾಯ್ದೆ ಉಳ್ಳವರ ಕಾಯ್ದೆ. ಇದರಿಂದ ಮಲೆನಾಡಿನ ಸಣ್ಣ ಹಿಡುವಳಿದಾರರಿಗೆ ಅನ್ಯಾಯವಾಗುತ್ತಿದೆ. ದೇಶದಲ್ಲಿ ಎಲ್ಲಾರು ರೈತರ ಋಣದಲ್ಲಿದ್ದಾರೆ. ಅನ್ನ ಕೊಡುವ ರೈತ ತಲೆ ತಗ್ಗಿಸಬಾರದು. ಸವಲತ್ತು ಕೇಳುವುದು ರೈತನ ಹಕ್ಕು, ನೀಡುವುದು ಸರ್ಕಾರದ ಕರ್ತವ್ಯ. ರೈತರನ್ನು ಸರ್ಕಾರ ಕಡೆಗಣಿಸುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಭೂಮಿ ಮಾರುವ ಸರ್ಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಡಬೇಕು. ಸರ್ಕಾರ ಬ್ರಿಟಿಷರು ನೆಡೆಸುತ್ತೀದ್ದ ಆಳ್ವಿಕೆಯ ನೀತಿಯನ್ನು ಅನುಸರಿಸುತ್ತೀದೆ’
‘ರೈತರಿಗೆ ಅನ್ಯಾಯ ಮಾಡಿದರೆ, ಮಣ್ಣು ತಿನ್ನಬೇಕು. ಕೈಗಾರಿಕೋದ್ಯಮ ವಾತಾವರಣ ಸೃಷ್ಟಿಸುವ ಹೆಸರಿನಲ್ಲಿ ಕಾರ್ಮಿಕರ ನ್ಯಾಯಬದ್ಧ ಹಕ್ಕುನ್ನು ಸರ್ಕಾರ ಕಸಿದುಕೊಳ್ಳುತ್ತೀದೆ. ಸರ್ಕಾರ ಮಾಡುವ ಕಾನೂನುಗಳು ರೈತರ ಪರವಾಗಿರಬೇಕೆ ಶ್ರೀಮಂತರ ಪರವಾಗಿರಬಾರದು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದ ಭೂಸುಧಾರಣೆ ತಿದ್ದುಪಡಿಯಿಂದ ಉಳ್ಳವರು ಹಾಗೂ ಇಲ್ಲದವರ ನಡುವೆ ಕೋಲಹಲವನ್ನು ಸೃಷ್ಟಿಸಿ ರೈತರ ಮರಣ ಶಾಸನಕ್ಕೆ ಸರ್ಕಾರ ಮುನ್ನುಡಿ ಬರೆಯುತ್ತಿದೆ’ ಎಂದರು.
ದೇಶಕ್ಕಾಗಿ ನಾವು ಬಳಗದ ನಿಖೇತ್ ರಾಜ್‌ಮೌರ್ಯ ಮಾತನಾಡಿ, ‘ಕಾರ್ಮಿಕ ಕಾಯ್ದೆ ತಿದ್ದುಪಡಿಯಿಂದ ಕಾರ್ಖಾನೆಗಳ ಮುಚ್ಚುವಿಕೆಯು ಸಲೀಸಾಗಲಿದ್ದು ದುಡಿಯುವ ಶ್ರಮಿಕರನ್ನು ನಿರುದ್ಯೋಗಿಗಳನ್ನಾಗಿಸುವ ಅಂಶ ಇದರ ಹಿಂದಿದೆ. ೧೯೭೪ರ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿಯು ಶ್ರೀಮಂತ ಬಂಡವಾಳಶಾಹಿಗಳಿಗೆ ಬೇಕಾಬಿಟ್ಟಿ ಕೃಷಿ ಜಮೀನು ಖರೀದಿಗೆ ಅವಕಾಶ ಮಾಡಿಕೊಡುತ್ತಿದ್ದು ಇದರಿಂದ ಸಣ್ಣ ರೈತರು ಭವಿಷ್ಯದಲ್ಲಿ ನೆಲೆ ಕಳೆದುಕೊಳ್ಳುವ ಭಯ ನಿರ್ಮಾಣವಾಗಿದೆ. ಇಂತಹ ಹಲವು ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು ಇದರ ಕರಾಳ ಮುಖವನ್ನು ನಾವುಗಳು ಅರಿತು ಸೂಕ್ತ ಪ್ರತಿಭಟನೆಗೆ ಸಿದ್ದರಾಗಬೇಕು. ಅದಕ್ಕೆ ಕಾನೂನು ತಜ್ಞರಿಂದ ವಿಚಾರ ಸಂಕೀರ್ಣ ಮತ್ತು ಸಂವಾದದಿಂದ ತಿಳಿಯಬೇಕು’ ಎಂದರು.
ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ‘ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಸಕ್ರೀಯವಾಗಿವೆ. ವಿದೇಶಿ ಪ್ರರೀತ ಪರಿಸರ ಸಂರಕ್ಷಣೆಯನ್ನು ನಮ್ಮ ಮೇಲೆ ಹೇರಿ, ವಿದೇಶಿ ಕಂಪೆನಿಗಳು ದೇಶದ ಆಡಳಿತವನ್ನೇ ನಿಯಂತ್ರಿಸುತ್ತಿದೆ. ಪರಿಸರ ಸಂರಕ್ಷಣೆಯ ವಿವಿಧ ವರದಿಗಳ ಮೂಲಕ ಜನರನ್ನು ತಮ್ಮ ನೆಲೆಯಿಂದ ಹೊರ ದಬ್ಬುವುದೇ ಇವರ ಮುಖ್ಯ ಕಾರ್ಯ. ರಾಷ್ಟ್ರೀಯ ಉದ್ಯಾನದ ಒಳಗೆ ಇರುವ ಜನರಿಗೆ ಪುನರ್ವಸತಿ ನೀಡಿ. ಬಜೆಟ್‌ನಲ್ಲಿ ಹಳದಿ ಎಲೆರೋಗ ನಿವಾರಣೆಗೆ ೨೫ಕೋಟಿ ಅನುದಾನ ನೀಡಿದೆ, ಅದು ಎಲ್ಲಿ’ ಎಂದು ಪ್ರಶ್ನಿಸಿದರು.
ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ‘ಮೆಸ್ಕಾಂ ಖಾಸಾಗೀಕರಣ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸಂವಿಧಾನ ಬಾಹಿರವಾಗಿದೆ ಮತ್ತು ತೈಲಾ, ದಿನ ಬಳಕೆ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ನೂಕಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಕೃಷಿ ಮಾರಕ ಕಾಯ್ದೆ ಮತ್ತು ಬೆಲೆ ಏರಿಕೆಯನ್ನು ಹಿಂಪಡೆಯಬೇಕು’ ಎಂದರು.
ಸಂವಾದದಲ್ಲಿ ಸಂಯುಕ್ತ ರೈತ-ಕಾರ್ಮಿಕ ಒಕ್ಕೂಟ ಅಧ್ಯಕ್ಷ ಕಲ್ಕುಳಿ ಚಂದ್ರಶೇಖರ್ ಹೆಗ್ಡೆ, ಕಾರ್ಯಾಧ್ಯಕ್ಷ ಕೆ.ಎಂ ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಕೆಲವಳ್ಳಿ ಕಳಸಪ್ಪ, ಹಾಗಲಗಂಚಿ ವೆಂಕಟೇಶ್, ಕಣದಮನೆ ಜಗದೀಶ್, ವಿಜಯ್ ಕುಮಾರ್, ಕಾಳ್ಯ ಸಂತೋಷ್, ಇದ್ದರು.
ಸಂವಾದದಲ್ಲಿ ತೆಗೆದುಕೊಂಡ ನಿರ್ಣಯ:
- ಮೂರು ಕೃಷಿ ಕಾಯ್ದೆಗಳು ರದ್ದಾಗಬೇಕು.
- ವಿದ್ಯುತ್ ಖಾಸಗೀಕರಣ ಕೈಬಿಡಬೇಕು.
- ರೈತರಿಗೆ ಬೆಂಬಲ ಬೆಲೆ ನೀಡಬೇಕು ಮತ್ತು ವಿಮೆ ನೀಡಬೇಕು.
- ಎಪಿಎಂಸಿ ಸದೃಡಗೋಳಿಸಬೇಕು.
- ಅರಣ್ಯ ಕಾಯ್ದೆ ತಿದ್ದುಪಡಿ ಮಾಡಿ ಸಾಗುವಳಿಗೆ ಯೋಗ್ಯ ಭೂಮಿ ಮತ್ತು ಅರಣ್ಯ ಭೂಮಿ ಎಂದು ವರ್ಗೀಕರಣ ಮಾಡಬೇಕು.
- ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳಿಗೆ ಒತ್ತುವರಿ ಮಾಡಿರುವ ಭೂಮಿಗೆ ಹಕ್ಕುಪತ್ರ ನೀಡಬೇಕು ಹಾಗೂ ಪರಿಹಾರ ನೀಡಬೇಕು.
- ಬಜೆಟ್‌ನಲ್ಲಿ ಘೋಷಿಸಿದ ೨೫ ಕೋಟಿ ಹಣವನ್ನು ಹಳದಿ ಎಲೆ ರೋಗ ನಿವಾರಣೆಗೆ ಬಿಡುಗಡೆ ಮಾಡಬೇಕು.
- ಸ್ಕಾಂಗೆ ಪವರ್ ಸ್ಟೇಷನ್‌ಗೆ ಭೂಮಿ ಮಂಜೂರು ಮಾಡಬೇಕು.
- ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಬೇಕು.
- ಅಡಿಕೆ ಎಲೆಚುಕ್ಕಿರೋಗಕ್ಕೆ ವೈಜ್ಞಾನಿಕ ಪರಿಹಾರೋಪಯವನ್ನು ಕಂಡು ಹಿಡಿಬೇಕು.
ಇದನ್ನೂ ಓದಿ: e Paper – October 26, 2021
ಇದನ್ನೂ ಓದಿ: Quarantine: ಇನ್ಮುಂದೆ ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ

























Discussion about this post