ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಆರಂಭವಾಗಿದ್ದ ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆಯು ಕಚೇರಿ ಮತ್ತು ವೈಯಕ್ತಿಕ ಸಮಯದ ನಡುವಣ ಅಂತರವನ್ನು ಕಡಿಮೆ ಮಾಡಿದೆ. ವರ್ಚುವಲ್ ಮೀಟಿಂಗ್ಗಳು, ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳು, ಅತಿಯಾದ ಕೆಲಸದ ಸಮಯ, ಇತ್ಯಾದಿಗಳು ಮನಸ್ಸಿನ ಮೇಲೆ ಒತ್ತಡಕ್ಕೆ ಕಾರಣವಾಗುತ್ತಿವೆ.
ಈ ಎಲ್ಲ ಜಂಜಾಟಗಳ ಮಧ್ಯದಲ್ಲಿ ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಕೆಲವು ಉಸಿರಾಟದ ವ್ಯಾಯಾಮಗಳು ನೆರವಾಗಬಲ್ಲವು. ಮನಸ್ಸನ್ನು ನಿರಾಳಗೊಳಿಸುವಂತಹ ಎರಡು ನಿಮಿಷದ ಉಸಿರಾಟದ ವ್ಯಾಯಾಮವೊಂದರ ಬಗ್ಗೆ ತಜ್ಞರು ಇಲ್ಲಿ ಮಾಹಿತಿ ನೀಡಿದ್ದಾರೆ.
ಈ ಎರಡು ನಿಮಿಷದ ಉಸಿರಾಟದ ವ್ಯಾಯಾಮ ನಿಮ್ಮ ಮನಸ್ಸನ್ನು ಪುನಶ್ಚೇತನಗೊಳಿಸಲು ಹಾಗೂ ಲವಲವಿಕೆಯಿಂದ ಇರುವಂತೆ ಮಾಡಲು ನೆರವಾಗಬಲ್ಲದು.
ಹೀಗೆ ಮಾಡಿ…
- ದೀರ್ಘವಾಗಿ ಉಸಿರಾಡಿ
- ನಿಧಾನವಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳಿ
- ತುಸು ಹೊತ್ತು ಹಾಗೆಯೇ ಉಸಿರನ್ನು ಹಿಡಿದಿಟ್ಟುಕೊಳ್ಳಿ
- ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ
- ದಿನದಲ್ಲಿ ನಡುನಡುವೆ ಬಿಡುವು ಮಾಡಿಕೊಂಡು ಹತ್ತು ಬಾರಿ ಈ ವಿಧಾನ ಅನುಸರಿಸಿ
- ಹೀಗೆಯೇ ಎರಡು ನಿಮಿಷಗಳ ಕಾಲ ಪುನರಾವರ್ತಿಸುತ್ತಾ ಇರಿ
ನೆಲದ ಮೇಲೆ ಸುಖಾಸನದಲ್ಲಿ ಕುಳಿತುಕೊಂಡು ಅಥವಾ ಅಥವಾ ಕುರ್ಚಿಯ ಮೇಲೆ ಕುಳಿತುಕೊಂಡು ಈ ವ್ಯಾಯಾಮ ಮಾಡಬಹುದು. ಈ ಉಸಿರಾಟದ ವ್ಯಾಯಾಮ ಮಾಡುವಾಗ ಬೆನ್ನು ನೆಟ್ಟಗಿರಲಿ.
ಎರಡು ನಿಮಿಷ ಉಸಿರಾಟವನ್ನೇ ಗಮನಿಸುತ್ತಾ ಈ ರೀತಿ ವ್ಯಾಯಾಮ ಮಾಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಏಕಾಗ್ರತೆ ವೃದ್ಧಿಯಾಗುತ್ತದೆ. ಜೊತೆಗೆ ಕೆಲಸ ಮಾಡುವ ಸಾಮರ್ಥ್ಯ, ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಪ್ರತಿದಿನ ಈ ವ್ಯಾಯಾಮ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
Discussion about this post