ಚಿಕ್ಕಮಗಳೂರು: ಮುಂದಿನ ತಿಂಗಳ ೨ನೇ ವಾರದಲ್ಲಿ ಜಿಲ್ಲಾದ್ಯಂತ ಕಾಲುಬಾಯಿ ರೋಗಕ್ಕೆ ಲಸಿಕಾ ಅಭಿಯಾನ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಎಂ.ಪ್ರಕಾಶ್ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು ೩.೨೪ ಲಕ್ಷ ಜಾನುವಾರುಗಳಿದ್ದು ಶಿವಮೊಗ್ಗ, ತುಮಕೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸಾಗಾಟವಾಗಲಿದ್ದು ತರೀಕೆರೆ, ಕಡೂರು ಭಾಗದ ಆಯ್ದ ಕಡೆಗಳಲ್ಲಿ ೧೨೦ ಕಾಲುಬಾಯಿ ರೋಗದ ಪ್ರಕರಣಗಳು ದಾಖಲಾಗಿದ್ದು ಅದಕ್ಕೆ ಪೂರಕವಾಗಿ ಈಗಾಗಲೇ ೫ ಕಿ.ಮೀ ವ್ಯಾಪ್ತಿಯಲ್ಲಿ ೧೦,೫೦೦ ಲಸಿಕೆ ನೀಡಲಾಗಿದ್ದು ರೋಗ ನಿಯಂತ್ರಣದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಮುಂದಿನ ತಿಂಗಳ ಮೊದಲವಾರದಲ್ಲಿ ಜಿಲ್ಲೆಗೆ ಅಗತ್ಯವಿರುವ ೩.೨೪ ಲಕ್ಷ ಕಾಲು ಬಾಯಿ ರೋಗದ ಲಸಿಕೆಗಳನ್ನು ಪೂರೈಕೆ ಮಾಡಲಿದ್ದು ೨ ನೇ ವಾರದಲ್ಲಿ ಜಿಲ್ಲೆಯಾದ್ಯಂತ ಪಲ್ಸ್‌ಪೊಲೀಯೋ ಮಾದರಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುವುದು, ಸದ್ಯದ ಸ್ಥಿತಿಯಲ್ಲಿ ಕಾಲುಬಾಯಿ ರೋಗದಿಂದ ಯಾವುದೇ ಜಾನುವಾರು ಸಾವನ್ನಪ್ಪಿಲ್ಲ ರೋಗ ಉಲ್ಬಣಗೊಂಡಲ್ಲಿ ಪೂರಕವಾದ ಲಸಿಕೆ ನೀಡಿ ಚಿಕಿತ್ಸೆ ನೀಡುವಂತೆ ಪಶುವೈದ್ಯಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರುಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ನೀಡಲು ೨೧೬ ಲಸಿಕೆದಾರರನ್ನು ಗುರುತಿಸಲಾಗಿದೆ. ಪ್ರತಿ ತಂಡಕ್ಕೆ ಓರ್ವ ಪರಿಣಿತ ಪಶುವೈದ್ಯರನ್ನು ನೇಮಿಸಲಾಗಿದೆ, ಜತೆಗೆ ಕೆಎಂಎಫ್ ಹಾಗೂ ಜಿಲ್ಲೆಯ ಒಟ್ಟು ೨೬ ವಾಹನಗಳು ಲಸಿಕಾ ಅಭಿಯಾನಕ್ಕೆ ಸಜ್ಜುಗೊಂಡಿದ್ದು ರೈತರ ಮನೆಗೆ ತೆರಳಿ ರಾಸುಗಳಿಗೆ ಲಸಿಕೆ ನೀಡಲಾಗುವುದು ಅದರಂತೆ ದಿನವೊಂದಕ್ಕೆ ೪೦ ರಿಂದ ೫೦ ರಾಸುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಪಶುಸಂಜೀವಿನಿ ಯೋಜನೆ ಅಡಿಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ ೧೬ ಜಿಲ್ಲೆಗಳಿಗೆ ಅಂಬುಲೆನ್ಸ್ ವಿತರಣೆಯಾಗಿದ್ದು ೨ನೇ ಹಂತದಲ್ಲಿ ಜಿಲ್ಲೆಗೆ ಅಂಬುಲೆನ್ಸ್ ವಿತರಣೆಯಾಗಲಿದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ತುರ್ತು ಶಸ್ತ್ರಚಿಕಿತ್ಸೆ ಒಳಗೊಂಡಂತೆ ಇನ್ನಿತರ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಪಾಲಿಕ್ಲಿನಿಕ್ ನಿರ್ಮಾಣಕ್ಕೆ ಸರ್ಕಾರದಿಂದ ೨.೧೦ ಕೋಟಿ ಅನುದಾನ ಮಂಜೂರಾಗಿದ್ದು, ತಾಂತ್ರಿಕ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದ್ದು ಈ ವರ್ಷದ ಅಂತ್ಯದೊಳಗೆ ಪಾಲಿಕ್ಲಿನಿಕ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು. ಪಾಲಿಕ್ಲಿನಿಕ್ ವೈಶಿಷ್ಟ್ಯಗಳೆಂದರೆ ಇಲ್ಲಿ ನುರಿತ ಪಶುತಜ್ಞರಿದ್ದು ಕುರಿ, ನಾಯಿ. ಹಸು, ಬೆಕ್ಕು ಸೇರಿದಂತೆ ಎಲ್ಲಾ ಮಾದರಿಯ ಜಾನುವಾರುಗಳಿಗೆ ಇಲ್ಲಿ ಚಿಕಿತ್ಸೆ ಸಿಗಲಿದೆ. ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಒಳಗೊಂಡಂತೆ ಎಲ್ಲಾ ಸೌಲಭ್ಯವು ಇಲ್ಲಿರಲಿದೆ ಬೇರೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಬೀಡಾಡಿ ದನಗಳು, ಒಳಗೊಂಡಂತೆ ಗಂಡುಕರುಗಳು, ಜಾನುವಾರು ಸಾಕಾಣೆ ಕಷ್ಟ ಎನ್ನುವವರು, ಗೋಶಾಲೆಗೆ ತಂದು ಬಿಡಬಹುದಾಗಿದೆ. ಇದರ ನಿರ್ವಹಣೆಯನ್ನು ಸ್ಥಳೀಯ ಖಾಸಗಿ ಸ್ವಯಂ ಸಂಸ್ಥೆಗಳಿಗೆ ನೀಡಲು ಉದ್ದೇಶಿಸಲಾಗಿದೆ. ಜತೆಗೆ ಸರ್ಕಾರದ ವತಿಯಿಂದ ಪ್ರತಿ ಜಾನುವಾರು ನಿರ್ವಹಣೆ ದಿನವೊಂದಕ್ಕೆ ೧೭.೫೦ ರೂಗಳನ್ನು ನೀಡಲಾಗುವುದು. ಯಾವುದೇ ಸಂಸ್ಥೆಗಳು ನಿರ್ವಹಣೆಗೆ ಮುಂದೆ ಬಾರದಿದ್ದಲ್ಲಿ ಇಲಾಖೆಯೇ ನಿರ್ವಹಣೆ ಮಾಡಲಿದೆ ಎಂದರು.
ಆರ್‌ಐಡಿಎಫ್ ಯೋಜನೆ ಅಡಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಪಶುಚಿಕಿತ್ಸಾಲಯಗಳು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಅದರಂತೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣ, ವಕ್ಕಲಗೆರೆ, ಶೆಟ್ಟಿಹಳ್ಳಿ, ಪಂಚನಹಳ್ಳಿಯಲ್ಲಿ ಪಶುಆಸ್ಪತ್ರೆಗಳಿಗೆ ತಲಾ ೩೪ ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಎಂದು ಮಾಹಿತಿ ನೀಡಿದರು.
———————-
ಗೋ ಹತ್ಯೇ ನಿಷೇಧ ಕಾಯ್ದೆ ಬಳಿಕ ಸರ್ಕಾರವು ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆಗಳನ್ನು ತೆರೆಯಲು ಆಯವ್ಯಯದಲ್ಲಿ ನಿರ್ಧರಿತ್ತು. ಅದರಂತೆ ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮದ ಬಳಿ ಪಶುಇಲಾಖೆಯ ಸುಮಾರು ೧೧ ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣ ಕಾರ್ಯ ಆರಂಭವಾಗಿದೆ
ಡಾ. ಎಂ.ಪ್ರಕಾಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ
———————-

























Discussion about this post