ದೆಹಲಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ನೀಡಿದೆ.
ಸಿರಿಧಾನ್ಯಗಳ ಪೈಕಿ ಜೋಳ, ಬಜ್ರಾ ಮತ್ತು ರಾಗಿಯಲ್ಲಿ ದೇಹಕ್ಕೆ ಬೇಕಾಗಿರುವ ಅಧಿಕ ಮಟ್ಟದ ಖನಿಜ, ಬಿ-ಕಾಂಪ್ಲೆಕ್ಸ್ ವಿಟಮಿನ್ಗಳು, ಪ್ರೋಟೀನ್ಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಈ ಧಾನ್ಯಗಳು ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ಸೂಕ್ತವಾಗಿದೆ. ಹಾಗಾಗಿ ಪಿಎಂ ಪೋಶನ್ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯಗಳನ್ನು ಬಳಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ
ಈ ಕುರಿತಂತೆ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ತಮ್ಮ ಜಂಟಿ ಪತ್ರ ಬರೆದಿದ್ದು, ಅರಿವು ಮತ್ತು ಲಭ್ಯತೆಯ ಕೊರತೆಯಿಂದಾಗಿ ಸಿರಿಧಾನ್ಯ ಬಳಕೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
“ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-IV ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 38 ಪ್ರತಿಶತ ಮಕ್ಕಳು ಅಪೌಷ್ಟಿಕತೆ ಮತ್ತು 59 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಕಾಡುತ್ತಿರುವ ಈ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಸಿರಿಧಾನ್ಯ ಸೇವನೆಗೆ ಒತ್ತು ನೀಡುತ್ತಿದೆ” ಎಂದು ಅವರು ಜಂಟಿ ಪತ್ರದಲ್ಲಿ ತಿಳಿಸಿದ್ದಾರೆ

























Discussion about this post