ಚಿಕ್ಕಮಗಳೂರು: ದೇಶದ ಎಲ್ಲಾ ಕಡೆಗಳಲ್ಲಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿ ಪ್ರತಿಯೊಬ್ಬರನ್ನು ಆರೋಗ್ಯವಂತರನ್ನಾಗಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಜಿಲ್ಲಾ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ ಬಸವನಹಳ್ಳಿಯ ಬಾಲಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಧನ್ವಂತರಿ ಜಯಂತಿಯ ೬ನೇ ಆಯುರ್ವೇದ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯುರ್ವೇದ ದಿನಾಚರಣೆಯನ್ನು ಭಾರತ ಮಾತ್ರವಲ್ಲದೇ ಇತರೆ 36 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸುತ್ತಿದ್ದಾರೆ ದೇಶದ ಎಲ್ಲಾ ಕಡೆಗಳಲ್ಲಿಯೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿ ಪ್ರತಿಯೊಬ್ಬರನ್ನು ಆರೋಗ್ಯವಂತರನ್ನಾಗಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು. ಆಯುರ್ವೇದ ವೈದ್ಯರು ಮತ್ತು ಅಲೋಪತಿ ವೈದ್ಯರು ಆರೋಗ್ಯ ರಕ್ಷಣೆಗಾಗಿ ಯಾವುದೇ ಬಿನ್ನಾಭಿಪ್ರಾಯಗಳಿಲ್ಲದೆ ಸಮಾನ ಚಿತ್ತದಿಂದ ಒಟ್ಟಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಧುನಿಕ ವೈದ್ಯ ಪದ್ಧತಿಯಲ್ಲಿ ಔಷಧಿಗಳು ಹಲವಾರು ಪರೀಕ್ಷೆಗೆ ಒಳಪಟ್ಟು ಉಪಯೋಗಿಸಲ್ಪಡುತ್ತದೆ. ಆದರೆ ಆಯುರ್ವೇದ ಔಷಧಿಗಳು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವುದರಿಂದ ಇದು ಸಮಯದ ಪರೀಕ್ಷೆಗೆ ಒಳಪಟ್ಟಿರುವುದರಿಂದ ಆಯುರ್ವೇದ ಪದ್ಧತಿಯ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು ಎಂದರು.
ವೈದ್ಯಾಧಿಕಾರಿ ಡಾ. ಹೇಮಲತ ಉಪನ್ಯಾಸ ನೀಡುತ್ತಾ ಮಾತನಾಡಿ ಪೋಷಣಾ ಆಹಾರದ ರಂಗೋಲಿ ಪ್ರದರ್ಶನ, ಹಸಿ ಮತ್ತು ಒಣ ಔಷಧಿ ದ್ರವ್ಯಗಳನ್ನು ಪರಿಚಯಿಸಿದರು. ರೋಗಗಳ ಚಿಕಿತ್ಸೆಗಾಗಿ ಅಲೋಪತಿ ವೈದ್ಯರ ಬಳಿ ಹೋಗುತ್ತೀರಿ, ಆರೋಗ್ಯ ರಕ್ಷಣೆಗೆ ಆಯುಷ್ ವೈದ್ಯರ ಬಳಿ ಹೋಗಿ ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕವಾಗಿ ಆರೋಗ್ಯಕರವಾಗಿರಬೇಕು, ಮನಸ್ಸು, ಆತ್ಮ ಇಂದ್ರೀಯಗಳ ಸಂಯೋಗವೆ ಶರೀರ. ಶತಾಯುಷಿಗಳಾದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳು ಆಯುರ್ವೇದ ಪದ್ಧತಿಯ ಬಗ್ಗೆ ಹೇಳಿದ್ದರು ಅಂತಾ ಮಾತನ್ನು ಪ್ರಸ್ತಾಪಿಸಿದರು. ಜತೆಗೆ Life style should be a signature ಎಂಬ ವಾಕ್ಯವನ್ನು ಪ್ರತಿಪಾದಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್ .ಗೀತಾ ಆಯುರ್ವೇದ ದಿನಾಚರಣಾ ಮಹತ್ವ, ಅಳವಡಿಕೆ ಕುರಿತು ಮಾಹಿತಿ ತಿಳಿಸುವ ಮೂಲಕ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಯುರ್ವೇದ ಔಷಧಿ ಸಸ್ಯಗಳನ್ನು ಬಾಲಿಕ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಡಶಾಲಾ ವಿಭಾಗಕ್ಕೆ ವಿತರಿಸಲಾಯಿತು. ಚವನ್ಪ್ರಾಶ್ ಲೇಹ್ಯ ಹಾಗೂ ಆಯುಷ್ ಕೈಪಿಡಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ , ಯುವಸಬಲೀಕರಣ, ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಡಾ. ಮಂಜುಳಾ ಹುಲ್ಲಹಳ್ಳಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಉಪ ಪ್ರಾಂಶುಪಾಲರಾದ .ಚಂದ್ರಮ್ಮ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯದ ಬಿ.ಕೆ.ಭಾಗ್ಯ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಯುಷ್ ವೈದ್ಯಾಧಿಕಾರಿಗಳು ಮತ್ತು ಆಯುಷ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಶಾಲಾ ಶಿಕ್ಷಕರಾದ ಅನಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

























Discussion about this post