ವಾಷಿಂಗ್ಟನ್: ಫೈಜರ್ ಕೋವಿಡ್ ಲಸಿಕೆಯನ್ನು 5 ರಿಂದ 11 ವಯಸ್ಸಿನ ಮಕ್ಕಳಿಗೆ ನೀಡಲು ಯುಎಸ್ ಆರೋಗ್ಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. “ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಮಹತ್ವದ ತಿರುವಿಗೆ ಸಾಕ್ಷಿಯಾಗಿದ್ದೇವೆ” ಎಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳ ಬಗ್ಗೆ ಪೋಷಕರು ಇನ್ಮುಂದೆ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಂದ ಇತರರಿಗೆ ಹರಡಬಹುದಾದ ಕೊರೊನಾ ಸೋಂಕನ್ನು ನಿಯಂತ್ರಿಸಲು ಫೈಜರ್ ಲಸಿಕೆಯು ಸಹಕಾರಿಯಾಗಿದೆ. ವೈರಸ್ ವಿರುದ್ಧದ ಹೋರಾಟಕ್ಕೆ ಅಮೆರಿಕ ಇಟ್ಟ ಮಹತ್ವದ ಹೆಜ್ಜೆ ಇದಾಗಿದೆ ಎಂದು ಹೇಳಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ವಾರಾಂತ್ಯದಲ್ಲಿ ಅಧಿಕಾರಿಗಳು ಲಕ್ಷಾಂತರ ಡೋಸ್ಗಳನ್ನು ಪ್ಯಾಕ್ ಮಾಡಿ ರವಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ಶೀಘ್ರವೇ ಆರಂಭಿಸಲಾಗುವುದು. ನವೆಂಬರ್ 8 ರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಮಕ್ಕಳಿಗೆ ಮೂರು ವಾರಗಳ ಅಂತರದಲ್ಲಿ ಎರಡು ಡೋಸ್ಗಳನ್ನು ನೀಡಲಾಗುವುದು.
Discussion about this post