ಹಾಂಗ್ಕಾಂಗ್: ಜಾಗತಿಕ ಹಣಕಾಸು ಹಬ್ ಎಂದು ಗುರುತಿಸಲ್ಪಡುವ ಹಾಂಗ್ಕಾಂಗ್ ಚೀನಾದ ಅಂಕೆಯಲ್ಲಿದ್ದರೂ ಸ್ವಾಯತ್ತ ನಾಡು. ಸ್ಥಳೀಯವಾಗಿ ಅನ್ವಯವಾಗುವ ಅಪರಾಧ ಪ್ರಕ್ರಿಯೆಯ ಕಾನೂನುಗಳು ಇಲ್ಲಿವೆ. ಆದರೆ, ಚೀನಾ ತನ್ನ ಕಾನೂನೇ ಜಾರಿಯಾಬೇಕೆಂದು. ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡಿ ಪ್ರಜಾಪ್ರಭುತ್ವದ ಪರ ಕೊರಳುಗಳನ್ನು ಹಿಚುಕುತ್ತಿದೆ.
ಪ್ರಜಾಪ್ರಭುತ್ವದ ಪರ ಹೋರಾಟವನ್ನು ಹತ್ತಿಕ್ಕಲು ಚೀನಾ ಸರ್ಕಾರ ಜಾರಿ ಮಾಡಿರುವ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ಬಂಧಿನಾಗಿರುವ ಅತಿ ಕಿರಿಯ ವಯಸ್ಸಿನ ಟೋನಿ ಚುಂಗ್ (20) ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಆದರೆ, ಇದಕ್ಕಾಗಿ ಕೀಳರಿಮೆ ಅಥವಾ ನಾಚಿಕೆ ಪಡುವುದಿಲ್ಲ. ಮೇನ್ ಲ್ಯಾಂಡ್ನ (ಚೀನಾ ಆಡಳಿತದ) ದಬ್ಬಾಳಿಕೆಯು ಇಲ್ಲಿ ಕೊನೆಗೊಳ್ಳಬೇಕು ಎಂದು ಹೇಳಿದ್ದಾನೆ.
‘ಜನರ ಹಕ್ಕಿಗಾಗಿ ಹೋರಾಡಿದಕ್ಕೆ ಶಿಕ್ಷೆಯಾದರೆ ಅದಕ್ಕೆ ನಾನು ನಾಚಿಕೆ ಪಡುವುದಿಲ್ಲ’ ಎಂದು ಚುಂಗ್ ಕೋರ್ಟ್ನಲ್ಲಿ ದಿಟ್ಟವಾಗಿ ಹೇಳಿದ್ದಾನೆ. ಇದರಿಂದ ಕೆರಳಿದ ಜಡ್ಜ್ ಸ್ಟ್ಯಾನ್ಲಿ ಚಾನ್, ಸದ್ದು ಇದು ಕೋರ್ಟ್; ಇಲ್ಲಿ ರಾಜಕೀಯ ಭಾಷಣಕ್ಕೆ ಅವಕಾಶ ಇಲ್ಲ ಎಂದು ಚುಂಗ್ನ ಬಾಯಿಮುಚ್ಚಿಸಿದರು.
ಬ್ರಿಟನ್ ವಸಾಹತು ಆಗಿದ್ದ ಹಾಂಗ್ಕಾಂಗ್ ಈಗ ಚೀನಾ ತೆಕ್ಕೆಯಲ್ಲಿದೆ. ಆದರೆ, ಇಲ್ಲಿ ಸ್ಥಳೀಯವಾಗಿ ಸ್ವಾಯತ್ತ ಸರ್ಕಾರ ಇದೆ. ಕಮ್ಯುನಿಸ್ಟ್ ಚೀನಾದಂತೆ ಹೆಚ್ಚು ಕಟ್ಟುಪಾಡು ಇಲ್ಲ. ಪ್ರಜಾಪ್ರಭುತ್ವದ ದನಿ ಇದೆ. ಕೆಲವು ವಿಧದ ಅಪರಾಧಕ್ಕೆ ಚೀನಾದಲ್ಲಿರುವಂತೆ ಕಠೋರ ಶಿಕ್ಷೆ ಇಲ್ಲ. ಇದನ್ನು ಹೋಗಲಾಡಿಸಿ ಏಕರೂಪವಾದ ಕಾನೂನು ಇರಬೇಕೆಂಬುದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಪೇಕ್ಷೆ.
ಇಂಥ ಅಪರಾಧಿಗಳನ್ನು ಮೇನ್ ಲ್ಯಾಂಡ್ಗೆ ಕರಸಿಕೊಂಡು ಶಿಕ್ಷಿಸಲು ಅನುಕೂಲವಾಗುವ ಶಾಸನವನ್ನು ಒಪ್ಪಬೇಕು ಎಂದು ಹಾಂಗ್ಕಾಂಗ್ ಮೇಲೆ ಒತ್ತಡ ಹಾಕಿದ್ದರು. ಇದನ್ನು ಹಾಂಗಾಕಾಂಗ್ನ ಮುಖ್ಯ ಆಡಳಿಗಾರರು ಒಪ್ಪಿದ್ದರು. ಆದರೆ, ಇದರ ವಿರುದ್ಧ 2019ರ ಏಪ್ರಿಲ್ನಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಹತ್ತಿಕ್ಕಲು ಚೀನಾ ಸೇನೆಯನ್ನು ಬಳಸಿದ್ದು, ಹಿಂಸಾಚಾರದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ.
ಪ್ರತಿಭಟನೆ ವ್ಯಾಪಕವಾದ ಕಾರಣ ಮತ್ತು ಜಾಗತಿಕ ಸಮುದಾಯದ ಬೆಂಬಲ ವ್ಯಕ್ತವಾದ ನಂತರ ಹಾಂಗ್ಕಾಂಗ್ ಆಡಳಿತ ಚೀನಾ ಹೇರಿದ ಕಾನೂನನ್ನು ತಡೆಹಿಡಿಯಬೇಕಾಯಿತು. ಆದರೆ, 2020ರಲ್ಲಿ ಚೀನಾ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿ ಮಾಡಿ ಹಾಂಗ್ಕಾಂಗ್ನಲ್ಲಿ ತನ್ನ ವಿರುದ್ಧ ದನಿ ಎತ್ತುವವರನ್ನು ಬಗ್ಗುಬಡಿಯುತ್ತಿದೆ. ಈ ಹೊಸ ಕಾನೂನಿನ ಅನ್ವಯ ಬಂಧಿತರಾದ ನಾಲ್ಕನೇ ವ್ಯಕ್ತಿ ಟೋನಿ ಚುಂಗ್. ಈತನ ಮೇಲೆ ಅಕ್ರಮ ಹಣಕಾಸು ವರ್ಗಾವಣೆಯ ಪ್ರಕರಣವನ್ನೂ ದಾಖಲಿಸಲಾಗಿದೆ.
‘ಒಂದು ದೇಶ, ಎರಡು ಆಡಳಿತ’ ಎಂಬ ಸೂತ್ರದಂತೆ ಹಾಂಗ್ಕಾಂಗ್ ಚೀನಾದ ನಾಡು ಎಂದು ಚೀನಾ ಹೇಳುತ್ತಿದೆ. ಶಾಲೆಗಳಲ್ಲಿ ಮ್ಯಾಂಡ್ರಿನ್ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡಿದೆ.
Discussion about this post