ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅಸುನೀಗಿದ ರೈತರಿಗೆ ಕೇಂದ್ರ ಸರ್ಕಾರ ಯಾವುದೇ ಸಂತಾಪ ಸೂಚಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈವರೆಗೆ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 750 ಮಂದಿ ರೈತರು ಮರಣಹೊಂದಿದ್ದಾರೆ. ಇವರಿಗೆ ಕನಿಷ್ಠ ಸಂತಾಪ ಕೂಡ ಸೂಚಿಸದ ಪ್ರಧಾನಿ ಮೋದಿ, ತಾವು ರೈತಪರ ಪ್ರಧಾನಿ ಅಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ರೈತರು ದೇಶದ ಭಾಗವಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ರೈತರು ಪ್ರತಿಭಟನೆಯನ್ನು ಬಿಟ್ಟು ಬೇರೆಲ್ಲೂ ಹೋಗಲ್ಲ. ಕೇಂದ್ರ ಸರ್ಕಾರ ಐದು ವರ್ಷ ಪೂರೈಸಬಹುದು. ಆದರೆ, ಜನರೇ ದೃಢೀಕರಿಸಿರುವ ಈ ಚಳವಳಿಯು ರೈತರಿಗೆ, ಕೃಷಿಗೆ ಮಾರಕವಾದ ಕಾಯ್ದೆಯನ್ನು ಹಿಂಪಡೆಯುವ ತನಕ ಮುಂದುವರಿಯುತ್ತದೆ ಎಂದು ಶುಕ್ರವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಕಳೆದ ವರ್ಷ ನವೆಂಬರ್ 26ರಿಂದ, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ರೈತರು, ಕೇಂದ್ರ ಸರ್ಕಾರದ ರೈತ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ 2020, ರೈತರ ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆ ಸುಗ್ರೀವಾಜ್ಞೆ 2020 ಅನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: Land Reforms Act: ಭೂ ಸುಧಾರಣ ಕಾಯ್ದೆಯಿಂದ ರೈತ ಭೂಮಿ ಕಳೆದುಕೊಳ್ಳಲಿದ್ದಾರೆ
Discussion about this post