ಚಿಕ್ಕಮಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಂಬಳೆ ಕ್ಷೇತ್ರದ ಎಂ.ಕೆ. ಧರ್ಮಯ್ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಡಾ.ಕಾಂತರಾಜ್ ಘೋಷಣೆ ಮಾಡಿದರು.
ಇದನ್ನೂ ಓದಿ: Damaged crop: ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಲು ಜಿಲ್ಲಾ ಕಾಂಗ್ರೆಸ್ ಒತ್ತಾಯ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷರಾಗಿ ಮೂಗ್ತಿಹಳ್ಳಿ ಕ್ಷೇತ್ರದ ಎಂ.ಎಸ್.ವಿಕ್ರಾಂತ್ ಆಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಅಭಿನಂದಿಸಿ ಮಾತನಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ರೈತರು ಹಾಗೂ ವರ್ತಕರಿಗೆ ಅನುಕೂಲವಾಗುವಂತೆ ಎಂಪಿಎಂಸಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ರೂಪಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: Innovator: ತೆರೆದ ತೋಳುಗಳಿಂದ ನವೋದ್ಯಮಿಗಳನ್ನು ಸ್ವಾಗತಿಸುತ್ತದೆ ಕರ್ನಾಟಕ
ನೂತನ ಎಂಪಿಎಂಸಿ ಅಧ್ಯಕ್ಷ ಎಂ.ಕೆ.ಧರ್ಮಯ್ಯ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷನಾಗಿ ನನ್ನನ್ನು ಆಯ್ಕೆಗೊಳಿಸಿರುವುದು ಸಂತಸ ತಂದಿದೆ, ಇರುವ ಅವಧಿಯಲ್ಲಿ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲಾಗುವುದು, ರೈತರ ಸಮಗ್ರ ಏಳಿಗೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಬೆಂಬಲಿತ ಸದಸ್ಯನಾಗಿದ್ದ ನನಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸದಸ್ಯರು, ಕ್ಷೇತ್ರದ ಶಾಸಕ ಸಿ.ಟಿ ರವಿಯವರು ಹಾಗೂ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಶ್ರಮಿಸಿದ್ದರು ಅವರೆಲ್ಲರಿಗೂ ಅಭಾರಿ ಎಂದು ಸ್ಮರಿಸಿದರು.
ಉಪಾಧ್ಯಕ್ಷ ವಿಕ್ರಾಂತ್ ಮಾತನಾಡಿ, ಎಂಪಿಎಂಸಿಯಲ್ಲಿ ಇರುವ ಮಾರುಕಟ್ಟೆ, ದಾಸ್ತಾನು, ವಾಹನ ನಿಲುಗಡೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಚುನಾವಣಾಧಿಕಾರಿ ಡಾ.ಕಾಂತರಾಜ್ ಮಾತನಾಡಿ, ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅವಧಿ ಮುಗಿದ ಹಿನ್ನಲೆ ಹೊಸದಾಗಿ ಚುನಾವಣೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು ಅದರಂತೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಇಬ್ಬರು ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಸಿ ಅಧ್ಯಕ್ಷರಾಗಿ ಧರ್ಮಯ್ಯ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ವಿಕ್ರಾಂತ್ ಅವರನ್ನು ಅವಿರೋಧವಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಜಿ.ಪಂ ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್, ಸೀತಾರಾಮ ಭರಣ್ಯ, ಮುಗುಳುವಳ್ಳಿ ದಿನೇಶ್, ಆಶ್ರಯ ಸಮಿತಿ ಸದಸ್ಯ ರಾಜೇಶ್, ಎಂಪಿಎಂಸಿ ಸದಸ್ಯರಾದ ಶಿವೇಗೌಡ, ಜಯಮ್ಮ, ರಾಜೀವ್, ಬಸವರಾಜ್, ಮಹೇಂದ್ರ, ಕವೀಶ್, ಹರೀಶ್, ಶೇಖರ್, ಪುಟ್ಟಸ್ವಾಮಿ ಶೆಟ್ಟಿ, ಗಾಯತ್ರಿ ಇದ್ದರು.
Dharmayya elected as APMC president
Discussion about this post