ನಟ ಪುನೀತ್ ರಾಜ್ಕುಮಾರ್ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಪಿಆರ್ಕೆ ಪ್ರೊಡಕ್ಷನ್ ಮತ್ತೆ ಗರಿಗೆದರಲಿದೆ. ಕೇವಲ ನಟರಾಗಲ್ಲ ನಿರ್ಮಾಪಕರಾಗಿಯೂ ಪುನೀತ್ ದೊಡ್ಡ ಕನಸು ಕಂಡಿದ್ದವರು. ತಂದೆ ರಾಜಕುಮಾರರಿಂದ ನಟನೆ, ತಾಯಿ ಪಾರ್ವತಮ್ಮನವರಿಂದ ಚಿತ್ರ ನಿರ್ಮಾಣದ ತಂತ್ರಗಳನ್ನು ತಿಳಿದಿದ್ದ ಪುನೀತ್ ಗೆ ಕನ್ನಡದ ಹೊಸ ಹುಡುಗರನ್ನು ಹುರಿದುಂಬಿಸಲೆಂದೇ ಪಿಆರ್ಕೆಯನ್ನು 2017ರಲ್ಲಿ ಆರಂಭಿಸಿದ್ದರು. ಆ ಮೂಲಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದರು.
ಪುನೀತ್ ಅವರ ಅಕಾಲಿಕ ನಿಧನದಿಂದ ಪಿಆರ್ಕೆ ಮುಂದೇನಾಗುತ್ತದೆ, ಆರಂಭವಾಗುತ್ತದೋ, ಇಲ್ಲವೋ ಎನ್ನುವ ಅನುಮಾನಗಳಿಗೆ ಶುಕ್ರವಾರ ರಾತ್ರಿ ಪಿಆರ್ಕೆ ಕಂಪೆನಿ ತೆರೆ ಎಳೆದಿದಿದೆ.
ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯ. ಆದರೆ, ಪುನೀತ್ ರಾಜ್ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಕಂಪೆನಿ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದೆ.
ಪುನೀತ್ ಅವರ ಕನಸಿನ ಕೂಸು ಪಿಆರ್ಕೆ ಪ್ರೊಡಕ್ಷನ್ ಹೌಸ್ 2017ರ ಜುಲೈ 20ರಂದು ಆರಂಭವಾಯಿತು. ಕವಲುದಾರಿ ಈ ಕಂಪೆನಿಯಿಂದ ತಯಾರಾದ ಮೊದಲ ಸಿನಿಮಾ, ಮಾಯಾಬಜಾರ್, ಫ್ರೆಂಚ್ ಬಿರಿಯಾನಿ ಸಿನಿಮಾಗಳು ಈಗಾಗಲೇ ತೆರೆಕಂಡಿವೆ. ಅಲ್ಲದೆ, ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್ ದಿ ಮ್ಯಾಚ್, ಓ2 ಮುಂತಾದ ಸಿನಿಮಾಗಳು ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾಗಲಿರುವ ಸಿನಿಮಾಗಳು.
ಪುನೀತ್ ರಾಜ್ ಕುಮಾರ್ ಈ ಮೊದಲೇ ಪತ್ನಿ ಅಶ್ವಿನಿ ಅವರಿಗೆ ಪಿಆರ್ಕೆ ಜವಾಬ್ದಾರಿಯನ್ನು ನೀಡಿದ್ದರು. ಕಳೆದ 8-10 ತಿಂಗಳಿನಿಂದ ಅಶ್ವಿನಿ ಅವರು ಸಂಪೂರ್ಣವಾಗಿ ಪಿಆರ್ಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಕಥೆಯ ಬಗೆಗಿನ ಚರ್ಚೆಗಳು, ಹಣಕಾಸಿನ ವಿಚಾರಗಳಲ್ಲಿ ಭಾಗಿಯಾಗುತ್ತಿದ್ದರಿಂದ ಈಗ ಪಿಆರ್ಕೆ ಸಂಪೂರ್ಣ ಹೊಣೆಗಾರಿಕೆ ಅವರ ಹೆಗಲ ಮೇಲೆ ಇದೆ. ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಇರಾದೆಯಿಂದಲೇ ಶುಕ್ರವಾರ ಕಂಪೆನಿ ಈ ರೀತಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ
Discussion about this post