ಯಾದಗಿರಿಯಿಂದ ಕಲಬುರ್ಗಿ ಹೋಗುವ ದಾರಿಯಲ್ಲಿ ಬರುವ ಊರು ವಾಡಿ. ಸಿಮೆಂಟ್ ಕಾರ್ಖಾನೆಗಳಿಗೂ ವಾಡಿ ಪ್ರಸಿದ್ಧ. ವಾಡಿ ಜಂಕ್ಷನ್ ಕರ್ನಾಟಕದ ಹಳೆಯ ರೈಲ್ವೆ ನಿಲ್ದಾಣಗಳಲ್ಲಿ ಒಂದು. ವಾಡಿಗೆ ಬಾಬಾಸಾಹೇಬ್ ಅಂಬೇಡ್ಕರ್ ಎರಡು ಸಲ ಭೇಟಿ ಕೊಟ್ಟಿದ್ದಾರೆ.
ವಾಡಿಯ State Bank Of Hyderabad ಶಾಖೆಯಲ್ಲಿ ಅಧಿಕಾರಿಯಾಗಿದ್ದವರು ಹಡಪದ ಅಂಜನೇಯ. ವಾಡಿ ಸಮೀಪದ ನಾಲವಾರ ಗ್ರಾಮದ ಅಂಜನೇಯ ತಮ್ಮ ಕ್ಷೌರಿಕ ವೃತ್ತಿ ಜೀವನ ಮಾಡುತ್ತಲೆ MCom ವಿದ್ಯಾಭ್ಯಾಸ ಮುಗಿಸಿ ಬ್ಯಾಂಕ್ ಸೇರಿದವರು. ಧಾರ್ಮಿಕ ಪ್ರವೃತ್ತಿಯ ಅಂಜನೇಯ ಆರೆಸ್ಸೆಸ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದವರು. ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲೆ ತೆರೆದವರು. ತಮ್ಮ ಹಡಪದ (ಸವಿತಾ) ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮಾಡುವ ಸ್ವಾಮೀಜಿ ಇಲ್ಲದಿರುವ ಕೊರತೆಯನ್ನು ಗುರುತಿಸಿದ ಅಂಜನೇಯ ತಮ್ಮ ಮಗನನ್ನೇ ಆ ದಿಕ್ಕಿನಲ್ಲಿ ಹೆಜ್ಜೆ ಇಡುವಂತೆ ಪ್ರೋತ್ಸಾಹಿಸಿದರು. ಡಿಪ್ಲೋಮಾ ಶಿಕ್ಷಣದ ತರುವಾಯ ಆದಿಚುಂಚನಗಿರಿ ಮಠದಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸ ಮಾಡುವಂತೆ ಮಾಡಿದರು. ಆನಂತರ 2012 ರಲ್ಲಿ ಪೇಜಾವರ ಶ್ರೀಗಳಿಂದ ಸಂನ್ಯಾಸ ದೀಕ್ಷೆ ಕೊಡಿಸಿದರು . ಸವಿತಾ ಗುರುಪೀಠಕ್ಕಾಗಿ ತಮ್ಮದೇ 6 ಎಕರೆ ಜಮೀನನ್ನು ಅಂಜನೇಯ ಬಿಟ್ಟುಕೊಟ್ಟರು. ಮಗ ಸನ್ಯಾಸ ಸ್ವೀಕರಿಸಿದ ಕೆಲ ತಿಂಗಳಲಲ್ಲಿ ಅಂಜನೇಯ ಇಹಲೋಕ ತ್ಯಜಿಸಿದರು.
ಪೇಜಾವರ ಶ್ರೀಗಳಿಂದ ದೀಕ್ಷೆ ಪಡೆದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಕಳೆದ 8 ವರ್ಷಗಳಿಂದ ಸವಿತಾ ಸಮಾಜದಲ್ಲಿ ಧಾರ್ಮಿಕ ಜಾಗೃತಿ ತರಲು ನಿರಂತರ ಸಂಚರಿಸುತ್ತಿದ್ದಾರೆ. ವಾಡಿ ಸಮೀಪದ ಜಮೀನಿನಲ್ಲಿ ಸವಿತಾ ಗುರುಪೀಠ ರೂಪಿಸಲು ಶ್ರಮಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಹಸುಗಳಿರುವ ಗೋಶಾಲೆ ನಿರ್ಮಿಸಿದ್ದಾರೆ. 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಎರಡು ಶಾಲೆಯನ್ನು ನಡೆಸುತ್ತಿದ್ದಾರೆ. ಕೊವಿಡ್ ಸಮಯದಲ್ಲಿ ಓಡಾಟ ಕಡಿಮೆಯಾದ್ದರಿಂದ ಜಮೀನಿನಲ್ಲೇ ನಿಂತು ಒಂದೂವರೆ ಎಕರೆಯಷ್ಟು ದೊಡ್ಡದಾದ ಕೃತಕ ಕೆರೆ (ಕೃಷಿ ಹೊಂಡ) ಯನ್ನು ನಿರ್ಮಿಸಿ ನೀರು ತುಂಬಿಸಿದ್ದಾರೆ. ಯಾದಗಿರಿ ಪರಿಸರದಲ್ಲಿ ಇದೇ ದೊಡ್ಡ ಕೃತಕ ಕೆರೆಯೆನಿಸಿದೆ.
ಶ್ರೀ ಶ್ರೀಧರಾನಂದ ಸ್ವಾಮೀಜಿ ನಿರಂತರ ಧಾರ್ಮಿಕ ಜಾಗೃತಿಯ ಮೂಲಕ ಸಮಾಜ ಬಂಧುಗಳು ಮತಾಂತರ ಆಗದಂತೆ ತಡೆಯೊಡಿದ್ದಾರೆ. ಉಳಿದ ಸಮಾಜಗಳೊಂದಿಗೆ ಸಾಮರಸ್ಯದಿಂದಿರುವ ಮಾನಸಿಕತೆಯನ್ನು ಸಮಾಜದೊಳಗೆ ರೂಪಿಸುತ್ತಿದ್ದಾರೆ.
(ಈ ಬರಹವನ್ನು ಸಾಮರಸ್ಯ ಸಂಸ್ಥೆಯ ವಾದಿರಾಜ ಅವರ ಫೇಸ್‌ಬುಕ್ ವಾಲ್ ನಿಂದ ಕೃತಜ್ಞತಾಪೂರ್ವಕವಾಗಿ ಬಳಸಲಾಗಿದೆ)
ಇದನ್ನೂ ಓದಿ: Help: ಉತ್ತರ ಕನ್ನಡದ ಈ ಬಡಕುಟುಂಬದ ಕ್ರೀಡಾಪಟುವಿನ ಚಿಕಿತ್ಸೆಗೆ ನೆರವಿಗೆ ಕೋರಿಕೆ

























Discussion about this post