ಮಳೆಗಾಲ ಮುಗಿಯುತ್ತಾ ಬಂದಿದೆ. ಇನ್ನೇನು ಡಿಸೆಂಬರ್ ಹೊಸ್ತಿಲು ಮೆಟ್ಟಿದರೆ ಸಾಕು ಚಳಿಗಾಲ ಶುರುವಾಗುತ್ತದೆ. ಗಡಗಡ ನಡುಗಿಸುವ ಚಳಿ ಮಕ್ಕಳ ದೇಹಕ್ಕೆ ಹೊಕ್ಕರೆ ನೆಗಡಿ, ತಲೆನೋವು ಬಂದು ಬಿಡುತ್ತವೆ. ಈ ಸಂದರ್ಭದಲ್ಲಿ ಮಕ್ಕಳನ್ನು ಬಹಳ ಜಾಗರೂಕವಾಗಿ ಕಾಪಾಡಬೇಕು. ಅದಕ್ಕಾಗಿ ಮನೆಯಲ್ಲಿ ಐಸ್ ಕ್ರೀಮ್ ಇದ್ದರೆ ಮೊದಲು ಅದನ್ನು ಮಕ್ಕಳಿಂದ ದೂರ ಇಡಿ. ಹೀಗೆ ಮಕ್ಕಳನ್ನು ಚಳಿಗಾಲ, ಶೀತದಿಂದ ದೂರ ಇಡಲು ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಪಟ್ಟಿ ಇಲ್ಲಿದೆ.
1) ಇವುಗಳನ್ನು ಮಾಡಿ
ಬೆಚ್ಚಗಿನ ಉಡುಪು ಹಾಕಿ
ಮಕ್ಕಳಿಗೆ ಚಳಿ, ಹಿಮ ದೇಹಕ್ಕೆ ಸೇರುವುದನ್ನು ತಡೆಯಲು ಬೆಚ್ಚಗಿನ ಉಡುಪು ಹಾಕಬೇಕು. ಇದರಿಂದ ಶೀತ ದಾಳಿ ಮಾಡುವ ಪ್ರಮಾಣ ಕಡಿಮೆಯಾಗುತ್ತದೆ. ಮಕ್ಕಳ ತಲೆ, ಕಿವಿ, ಕುತ್ತಿಗೆ ಹಾಗೂ ಕೈಗಳನ್ನು ಮುಚ್ಚುವಂತೆ ಉಡುಪುಗಳನ್ನು ಹಾಕಿ.
ಮನೆ ಒಳಗೆ ಆಟವಾಡಲಿ
ಚಳಿಗಾಲದಲ್ಲಿ ಮುಸ್ಸಂಜೆಯ ತನಕ ಹೊರಗಡೆ ಆಟವಾಡುವುದರಿಂದ ಶೀತ ಬಾಧಿಸಬಹುದು. ಏಕೆಂದರೆ, ಸಂಜೆ ಹೊತ್ತು. ನಿಸರ್ಗದಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಯುತ್ತಾ ಹೋಗುತ್ತದೆ. ಚಳಿಗಾಲದಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ಈ ರೀತಿಯ ಹವಾಮಾನ ಬದಲಾವಣೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಮಾಡುತ್ತದೆ. ಮಕ್ಕಳು ಬೆಳಗಿನ ಬಿಸಿಲಿನಲ್ಲಿ ಆಟವಾಡುವುದು ಒಳಿತು. ಸಂಜೆಯ ಹೊತ್ತು ಮನೆಯ ಒಳಗಿದ್ದರೆ ಕ್ಷೇಮ.
ಮೂಗಿನ ರಕ್ತಸ್ರಾವ ತಪ್ಪಿಸಿ
ಚಳಿಗಾಲದಲ್ಲಿ ರೂಮಿನ ತಂಪನ್ನು ಏರಿಸುವ ಫ್ಯಾನ್, ಎಸಿಗಳ ಬಳಕೆಯನ್ನು ಬಿಟ್ಟು ಬಿಡಬೇಕು. ಇಲ್ಲದೇ ಇದ್ದರೆ ಮಕ್ಕಳ ಮೂಗಿನೊಳಗಿನ ತಾಪಮಾನದಲ್ಲಿ ವ್ಯತ್ಯಾಸವಾಗುವ ಸಾಧ್ಯ ಇರುತ್ತದೆ. ಮೂಗಿನ ರಕ್ತಸ್ರಾವಕ್ಕೆ ಇದು ಕಾರಣ ಕೂಡ ಆಗಬಹುದು. ಅದಕ್ಕಾಗಿಯೇ ಲವಣಯುಕ್ತ ಡ್ರಾಪ್ಸ್ ಸಿಗುತ್ತದೆ. ಇದನ್ನು ಮಕ್ಕಳು ಮೂಗಿನ ಎರಡೂ ಹೊಳ್ಳೆಗಳಿಗೆ ಆಗಾಗ ಹಾಕುವುದರಿಂದ ಮೂಗಿನೊಳಗಿನ ತೇವಾಂಶ ಕಾಪಾಡಬಹುದು. ಮಕ್ಕಳನ್ನು ಮೂಗಿನ ರಕ್ತಸ್ರಾವದಿಂದ ದೂರ ಇರಿಸಬಹುದು.
ಹುಳಿ ಹಣ್ಣುಗಳುಮಕ್ಕಳು ಊಟ, ತಿಂಡಿಯಲ್ಲಿ ಸಿಟ್ರಿಕ್ ಅಂಶ ಇರುವ ಅಂದರೆ, ನಿಂಬೆಹಣ್ಣು, ಮೂಸಂಬಿಯಂಥ ಹಣ್ಣುಗಳ ಜ್ಯೂಸ್ ಗಳು ಇರಲಿ. ದೇಹದಲ್ಲಿ ಕೋಶಗಳ ಉತ್ಪತ್ತಿ ಹೆಚ್ಚುತ್ತವೆ. ಯಾವುದೇ ಕಾರಣಕ್ಕೂ ಅವು ಸಾಯುವುದಿಲ್ಲ. ಒಂದು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಈ ಜ್ಯೂಸ್ಗಳನ್ನು ಬಿಸಿನೀರಲ್ಲಿ ಮಾಡಿಕೊಡಬಹುದು. ಇದರ ಜೊತೆಗೆ ಜೇನುತುಪ್ಪ ಸ್ವಲ್ಪ ಹಾಕಿದರೆ ಚಳಿಗಾಲದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಓಂ ಕಾಳಿನ ನೀರು ಕೊಡಿ
ನಮ್ಮ ಹಿಂದಿನವರು ದೇಹವನ್ನು ಬೆಚ್ಚಗಿಡಲು ಬಿಸಿಬಿಸಿ ಓಂ ಕಾಳಿನ ನೀರು ಕುಡಿಯುತ್ತಿದ್ದರು. ಅದನ್ನೇ ಚಳಿಗಾಲದಲ್ಲಿ ನಾವು ಜಾರಿ ಮಾಡಿದರೆ, ಶೀತ, ನೆಗಡಿಯಿಂದ ಮುಕ್ತಿ ಸಿಗುತ್ತದೆ. ಓಂ ಕಾಳು, ಎದೆ ಭಾಗದಲ್ಲಿ ಕಫದಿಂದಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ. ಒಂದು ಟೇಬಲ್ ಸ್ಪೂನಷ್ಟು ಓಂಕಾಳನ್ನು ಹಾಕಿ ಬಿಸಿನೀರಲ್ಲಿ ಕುದ್ದಿಸಿ, ಶೀತ ಹೆಚ್ಚಾಗಿರುವಾಗೆಲ್ಲ ಮಕ್ಕಳಿಗೆ ಕೊಡಿ.
2) ಇದನ್ನು ಮಾಡಬೇಡಿ
ಸಿಹಿ ಪದಾರ್ಥ ಬೇಡ
ಶೀತದ ಕಾಲದಲ್ಲಿ ಸಿಹಿ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದನ್ನು ಸಂಪೂರ್ಣ ಕಡಿಮೆ ಮಾಡಿ. ಮುಖ್ಯವಾಗಿ, ಶೀತ ಬಾಧಿಸಿದಾಗ ಯಾವ ಕಾರಣಕ್ಕೂ ಸಕ್ಕರೆಯುಕ್ತ ಪೇಯ, ಪದಾರ್ಥಗಳನ್ನು ನೀಡಬೇಡಿ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ಡ್ರೈಫ್ರೂಟ್ಸ್ ಬೇಡ
ಶೀತ ಹೆಚ್ಚಾಗಿರುವಾಗ ಡ್ರೈಫ್ರೂಟ್ಸ್ ಅಂದರೆ, ಗೋಡಂಬಿ, ಬಾದಾಮಿ, ಪಿಸ್ತದಂಥ ಪದಾರ್ಥಗಳನ್ನು ಕೊಡುವುದು ಬೇಡ. ಮಕ್ಕಳ ಜೀರ್ಣ ಕ್ರಿಯೆ ಸಂದರ್ಭದಲ್ಲಿ ನಿಧಾನವಾಗಿರುತ್ತದೆ ಜೊತೆಗೆ ಅಗಿಯಲು ಕಷ್ಟವೂ ಆಗಬಹುದು. ಕೆಲವು ಸಲ ಪುಟ್ಟ ಮಕ್ಕಳ ಗಂಟಲಲ್ಲಿ ಡ್ರೈಫ್ರೂಟ್ಸ್ ಚೂರುಗಳು ನಿಂತು ಬಿಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇವನ್ನು ಕೊಟ್ಟು ಸಮಸ್ಯೆಯನ್ನು ಹೆಚ್ಚು ಮಾಡುವುದಕ್ಕಿಂತ ಕಡಿಮೆ ಮಾಡುವುದೇ ಲೇಸು.
ಎಣ್ಣೆ ಪದಾರ್ಥ ಬೇಡ
ಮಕ್ಕಳಿಗೆ ಶೀತವಾದಾಗ ಖಾರ ಮತ್ತು ಎಣ್ಣೆ ಪದಾರ್ಥಗಳನ್ನು ಕೊಡುವುದರಿಂದ ಶೀತಯುಕ್ತ ದೇಹಕ್ಕೆ ಕಿರಿಕಿರಿಯಾಗುತ್ತದೆ. ಅದರಲ್ಲೂ ಗಂಟಲಲ್ಲಿ ನಸನಸ ಹೆಚ್ಚಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೆ ಎಣ್ಣೆಯುಕ್ತ ಆಹಾರವನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೊಡುವುದು ಸೂಕ್ತವಲ್ಲ.
ಇದನ್ನೂ ಓದಿ: Song Singing: ಕನ್ನಡ ಹಾಡುಗಳ ಝೇಂಕಾರ, ಗೀತ ಗಾಯನದಲ್ಲಿ ನಲಿದ ಮಕ್ಕಳು
Discussion about this post