ನವದೆಹಲಿ: ದೇಶದಲ್ಲಿ ಸಾಕು ಪ್ರಣಿಗಳ ಸ್ಥಿತಿಗತಿ ಬಗ್ಗೆ ನೆಲೆರಹಿತವಾದ ಮುದ್ದಿನ ಸಾಕು ಪ್ರಾಣಿಗಳ ಸೂಚ್ಯಂಕದ ವರದಿ ಬಿಡುಗಡೆಯಾಗಿದ್ದು, 6.20 ಕೋಟಿ ಬೀದಿ ನಾಯಿಗಳು ಮತ್ತು ಆಶ್ರಯವಿಲ್ಲದ 91 ಲಕ್ಷ ಬೆಕ್ಕುಗಳು ಇವೆ ಎಂದು ತಿಳಿಸಿದೆ. 88 ಲಕ್ಷ ನಾಯಿ ಮತ್ತು ಬೆಕ್ಕುಗಳು ಅಗತ್ಯ ಆಶ್ರಯ ಹೊಂದಿದೆ ಎಂದು ಹೇಳಿದೆ. ಈ ಅಂಕಿಅಂಶವು 10 ಪಾಯಿಂಟ್ಗಳ ಮಾನಕದಲ್ಲಿ ಭಾರತವನ್ನು 2.4ರಲ್ಲಿ ಇರಿಸಿದೆ.
ದೇಶದ ಜನಸಂಖ್ಯೆಯಲ್ಲಿ ಶೇ. 77ರಷ್ಟು ಮಂದಿ (10 ಜನರಲ್ಲಿ 8 ಮಂದಿ) ಕನಿಷ್ಠ ವಾರದಲ್ಲಿ ಒಮ್ಮೆಯಾದರೂ ಬೀದಿ ನಾಯಿಗಳ ದರ್ಶನ ಪಡೆಯುವುದಾಗಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ. ಶೇ. 68 ಮಂದಿ (10ರಲ್ಲಿ 7 ಮಂದಿ) ವಾರದಲ್ಲಿ ಒಂದು ದಿನವಾದರೂ ಆಶ್ರಯವಿಲ್ಲದ ಬೆಕ್ಕು ಬೀದಿಯಲ್ಲಿ ಕಾಣುತ್ತದೆ ಎಂದು ಹೇಳಿದ್ದಾರೆ.
ನಿರಾಶ್ರಿತ ನಾಯಿ ಅಥವಾ ಬೆಕ್ಕುಗಳ ಪಾಲನೆಗೆ ಬಹುಪಾಲು ಜನರು ಆಸಕ್ತಿ ವಹಿಸಿರುವುದರಿಂದ ಭವಿಷ್ಯದಲ್ಲಿ ಇಂಥ ಪ್ರಾಣಿಗಳ ಯೋಗಕ್ಷೇಮದ ಚಿಂತೆ ಹೆಚ್ಚು ಕಾಡುವುದಿಲ್ಲ ಎಂದು ಅಧ್ಯಯನ ಹೇಳಿದೆ. ಸಾಕು ಪ್ರಾಣಿಗಳ ಆಶ್ರಯ ತಾಣಕ್ಕೆ ಭೇಟಿ ನೀಡುವ ಕುರಿತ ಪ್ರಶ್ನೆಗೆ ಶೇ. 61ರಷ್ಟು ಮಂದಿ ನಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ. ತಾವಿರುವ ಸ್ಥಳದಿಂದ ದೂರ ಇರುವ ಕಾರಣ ಭೇಟಿ ನೀಡಲು ಆಗಿಲ್ಲ ಅಥವಾ ಇಂಥ ಸ್ಥಳಕ್ಕೆ ಹೋಗುವುದರಿಂದ ಘನತೆಗೆ ಧಕ್ಕೆ ಆಗುತ್ತದೆ ಎಂದಿದ್ದಾರೆ. ಇದು ಜಾಗತಿಕ ಪ್ರಮಾಣ (ಶೇ. 31) ದ್ವಿಗುಣವಾಗಿರುವುದು ಕಳವಳಕಾರಿ ಎಂದು ಸಮೀಕ್ಷೆ ತಿಳಿಸಿದೆ. ಭಾರತದಲ್ಲಿ ಪ್ರತಿ ನೂರು ಜನಕ್ಕೆ ಮೂರು ಬೀದಿ ನಾಯಿಗಳ ಸಂಖ್ಯೆ ಇದೆ.
ಬೀದಿ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪರಿಣಾಮಕಾರಿ ಆಗದಿರುವುದರಿಂದ ಆರೇಳು ವರ್ಷಗಳಲ್ಲಿ ಅವುಗಳ ಸಂತತಿ ಹೆಚ್ಚಿದೆ. ಭಾರತದಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತ ನೀತಿಯು 20 ವರ್ಷ ತಡವಾಗಿ ಜಾರಿಯಾಗಿರುವುದೂ ಅವುಗಳ ಸಂತತಿ ಹೆಚ್ಚಳ ಕಾರಣ. ಈ ನೀತಿಯನ್ನು ಮೊದಲೇ ಮಾಡಿದ್ದರೆ ಅವುಗಳ ಸಂಖ್ಯೆ ನಿಯಂತ್ರಿಸಬಹುದಿತ್ತು ಎಂದು ಪೀಪಲ್ಸ್ ಫಾರ್ ಅನಿಮಲ್ಸ್ (ಪಿಎಎ) ಸ್ವಯಂ ಸೇವಾ ಸಂಸ್ಥೆಯ ಪ್ರಾಣಿ ಹಕ್ಕುಗಳ ಪರ ಹೋರಾಟಗಾರ್ತಿ ಗೌರಿ ಮುಲೆಖಿ ಹೇಳಿದ್ದಾರೆ. ಚೀನಾದಲ್ಲಿ ನಿರಾಶ್ರಿತ ನಾಯಿ ಮತ್ತು ಬೆಕ್ಕುಗಳ ಸಂಖ್ಯೆ 7.50 ಕೋಟಿ, ಅಮೆರಿಕದಲ್ಲಿ 4.80 ಕೋಟಿ, ಜರ್ಮನಿಯಲ್ಲಿ 20.60 ಲಕ್ಷ, ಗ್ರೀಸ್‌ನಲ್ಲಿ 20 ಲಕ್ಷ, ಮೆಕ್ಸಿಕೊದಲ್ಲಿ 74 ಲಕ್ಷ, ರಷ್ಯಾ ಮತ್ತು ದಣ ಆಫ್ರಿಕಾದಲ್ಲಿ ತಲಾ 41 ಲಕ್ಷ ಹಾಗೂ ಬ್ರಿಟನ್ನಲ್ಲಿ 11 ಲಕ್ಷ ಇದೆ.
ಇದನ್ನೂ ಓದಿ: ದಾರಿ ತಪ್ಪಿ ಬಂದ ಕಾಡು ಬೆಕ್ಕಿನ ಐದು ಮರಿಗಳನ್ನು ರಕ್ಷಿಸಿದ ಗ್ರಾಮಸ್ಥರು

























Discussion about this post