ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ರಾತ್ರಿ ಪನ್ವೇಲ್ನಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ಹಾವು ಕಚ್ಚಿದೆ.
ಮಹಾರಾಷ್ಟ್ರದ ರಾಯಗಢ ಬಳಿ ಇರುವ ಫಾರ್ಮ್ಹೌಸ್ನಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೃಷ್ಟವಶಾತ್ ಅವರಿಗೆ ಕೆಚ್ಚಿರುವುದು ವಿಷರಹಿತ ಹಾವೆಂಬುದು ಬಳಿಕ ತಿಳಿದುಬಂದಿತ್ತು. ಭಾನುವಾರ ಬೆಳಿಗ್ಗೆವರೆಗೂ ಆಸ್ಪತ್ರೆಯಲ್ಲಿ ಇದ್ದ ಅವರನ್ನು ಬಳಿಕ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ನಿಕ್ ಜೋನಸ್ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಪ್ರಿಯಾಂಕಾ ಚೋಪ್ರಾ ಉತ್ತರ…
ಇದೀಗ ಹಾವು ಕಚ್ಚಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್, ‘ನನ್ನ ಫಾರ್ಮ್ಹೌಸ್ನಲ್ಲಿ ಹಾವೊಂದು ಕೋಣೆಗೆ ನುಗ್ಗಿತ್ತು. ಇದನ್ನು ನೋಡಿ ಮಕ್ಕಳು ಭಯಭೀತರಾಗಿದ್ದರು. ನಾನು ಅದನ್ನು ಕೋಲು ಬಳಸಿ ಹೊರಗೆ ಹಾಕಲು ಪ್ರಯತ್ನಿಸಿದೆ. ಆದರೆ ಅದು ನನ್ನ ಕೈ ಬಳಿ ಬಂದಿತು. ಅದನ್ನು ಬಿಡಿಸಲು ನನ್ನ ಇನ್ನೊಂದು ಕೈಯಿಂದ ಹಿಡಿದುಕೊಂಡೆ. ನಮ್ಮ ಸಿಬ್ಬಂದಿ ಆ ಹಾವು ವಿಷಕಾರಿ ಎಂದು ಭಾವಿಸಿದರು. ಹಾವು ಮೂರು ಬಾರಿ ಕಚ್ಚಿತ್ತು’ ಎಂದು ಹೇಳಿದ್ದಾರೆ.
‘ನಂತರ ನಾವು ಆಸ್ಪತ್ರೆಗೆ ಹೋದೆವು. ಹಾವನ್ನು ಕೂಡ ತೆಗೆದುಕೊಂಡೇ ಹೋದೆವು. ಅದು ವಿಷಕಾರಿಯಲ್ಲ ಎಂದು ದೃಢಪಟ್ಟಿತು. 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ ಮತ್ತು ವಿಷನಿರೋಧಕ ಚುಚ್ಚುಮದ್ದು ಪಡೆದೆ. ನಾನೀಗ ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ’ ಎಂದು ಸಲ್ಮಾನ್ ಹೇಳಿದ್ದಾರೆ.
ಇದನ್ನೂ ಓದಿ: ಸೋನಂ ಕಪೂರ್ ಅಥವಾ ಸಾರಾ ಅಲಿ ಖಾನ್, ಯಾರು ಉತ್ತಮ ಸಹ ನಟಿ? ಹೀಗಂದ್ರು ಧನುಷ್…
Discussion about this post