Special Story: ಶ್ರೇಯಾ ಘೋಶಾಲ್.. ಭಾರತೀಯ ಸಿನಿರಂಗ ಕಂಡ ಅತ್ಯದ್ಭುತ ಗಾಯಕಿ. ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್‌ನಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡ ಶ್ರೇಯಾ ಇಡೀ ಪ್ರಪಂಚಕ್ಕೆ ತುಂಬಾ ಫೇಮಸ್ ಸಿಂಗರ್.. ಈಕೆಯ ಲೈಫ್ ಜರ್ನಿ, ಗಾಯಕಿಯಾದ ರೀತಿ, ಶ್ರೇಯಾ ಸಾಧನೆ ಬಗ್ಗೆ ಸಾಕಷ್ಟು ಮಾಹಿತಿಯನ್ನ ಇವತ್ತು ನಾವು ನಿಮಗೆ ಹೇಳಲಿದ್ದೇವೆ.

ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ ಜಿಲ್ಲೆಯ ಬೆರ್ಹಂಪೋರ್‌ನ ಬಂಗಾಲಿ ಹಿಂದೂ ಪರಿವಾರದಲ್ಲಿ ಶ್ರೇಯಾ ಘೋಶಾಲ್ ಜನನವಾಯಿತು. ಶ್ರೇಯಾ ತಂದೆ ಬಿಶ್ವಜೀತ್ ಘೋಶಾಲ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ತಾಯಿ ಶರ್ಮಿಷ್ಠಾ ಘೋಶಾಲ್ ಗೃಹಿಣಿಯಾಗಿದ್ದರು. ತಮ್ಮ ಸೌಮ್ಯದೀಪ್ ಘೋಶಾಲ್. ಶ್ರೇಯಾ ಹುಟ್ಟಿದ ಮೂರು ತಿಂಗಳಿಗೆ, ಅವರ ತಂದೆಗೆ ರಾಜಸ್ತಾನದ ರಾವತ್‌ಭಾಟಾ ಎಂಬಲ್ಲಿ ಟ್ರಾನ್ಸ್‌ಫರ್ ಸಿಕ್ಕಿದ್ದು, ಶ್ರೇಯಾ ರಾವತ್‌ಭಾಟಾದಲ್ಲೇ ತಮ್ಮ ಪ್ರೈಮರಿ ಶಿಕ್ಷಣವನ್ನ ಮುಗಿಸಿದರು.
ಶ್ರೇಯಾ ತಮ್ಮ 4ನೇ ವಯಸ್ಸಿಗೆ ಸಂಗೀತ ಕಲಿಯಲು ಶುರು ಮಾಡಿದ್ದು, ಮಗಳನ್ನ ಉತ್ತಮ ಗಾಯಕಿಯನ್ನಾಗಿ ಮಾಡಬೇಕು ಅನ್ನೋದು ಶ್ರೇಯಾಳ ಪೋಷಕರ ಕನಸಾಗಿತ್ತು. ಇದಕ್ಕೆ ತಕ್ಕಂತೆ ಶ್ರೇಯಾಳ ತಂದೆಗೆ ಮುಂಬೈಗೆ ಟ್ರಾನ್ಸ್‌ಫರ್ ಸಿಕ್ಕಿತು. ಮುಂಬೈನಲ್ಲಿ ಶಿಕ್ಷಣ ಪಡೆಯುತ್ತ, ಸಂಗೀತ ಕಲಿಯುತ್ತಿದ್ದ ಶ್ರೇಯಾ ಪ್ರಸಿದ್ಧ ರಿಯಾಲಿಟಿ ಶೋ ಎನ್ನಿಸಿಕೊಂಡ ಸರೆಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿನ್ನರ್ ಆದ್ರು.
ಮೊದ ಮೊದಲು ಆಲ್ಬಂ ಸಾಂಗ್ಸ್ ಹಾಡುತ್ತಿದ್ದ ಶ್ರೇಯಾ ಘೋಶಾಲ್, ಸರೆಗಮಪ ವಿನ್ ಆದ ಬಳಿಕ ಬಾಲಿವುಡ್‌ನಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡರು. ಬಾಲಿವುಡ್‌ನ ಉನ್ನತ ನಿರ್ದೇಶಕರಲ್ಲಿ ಒಬ್ಬರಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಸಿನಿಮಾದಲ್ಲಿ ಹಾಡುವ ಅವಕಾಶವನ್ನ ಪಡೆದರು. ಬೇರಿ ಪಿಯಾ, ಢೋಲಾರೆ, ಸಿಲ್ ಸಿಲಾ ಎ ಚಾಹತ್‌ಕಾ ಸೇರಿ ಇನ್ನೂ ಕೆಲವು ಹಾಡುಗಳಿಗೆ ಶ್ರೇಯಾ ಕಂಠದಾನ ಮಾಡಿದ್ರು. ಬೇರಿ ಪಿಯಾ, ಡೋಲಾರೆ ಹಾಡುಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಅವಾರ್ಡ್ ಸಹ ಗಿಟ್ಟಿಸಿಕೊಂಡ್ರು. ಇಲ್ಲಿಂದ ತಮ್ಮ ಸಿನಿಜರ್ನಿ ಶುರುಮಾಡಿದ ಶ್ರೇಯಾ ಮತ್ತೆ ಹಿಂದಿರುಗಿ ನೋಡಲೇ ಇಲ್ಲ.
ಈಕೇಯ ಕಂಠಸಿರಿಗೆ ಮನಸೋತ ನಿರ್ದೇಶಕರು ನಿರ್ಮಾಪಕರು ನಮ್ಮ ಸಿನಿಮಾದಲ್ಲಿ ಶ್ರೇಯಾ ಘೋಶಾಲ್ ಹಾಡಿದ ಒಂದು ಹಾಡಾದ್ರೂ ಇರಲೇಬೇಕು ಅನ್ನೋ ಮಟ್ಟಿಗೆ ಶ್ರೇಯಾ ಫೇಮಸ್ ಆದ್ರು. ಸಾಕಷ್ಟು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡ್ರು. ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಂತೂ ಯಾವುದಾದರೂ ಹಾಡಿಗೆ ಶ್ರೇಯಾ ಘೋಶಾಲ್ ಹಾಡು ನಾಮಿನೇಟ್ ಆಯಿತಂದ್ರೆ, ಆ ಪ್ರಶಸ್ತಿಗೆ ಅವರೇ ಭಾಜನರು ಅನ್ನೋದು ಎಲ್ಲರಿಗೂ ಗೊತ್ತೇ ಇತ್ತು. ಅಷ್ಟರ ಮಟ್ಟಿಗೆ ಶ್ರೇಯಾ ಅತ್ಯುತ್ತಮ ಗಾಯಕಿಯಾಗಿ ಹೊರಹೊಮ್ಮಿದ್ದರು.
ಹಿಂದಿ, ಬೆಂಗಾಲಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಓರಿಯಾ ಸೇರಿ ಹಲವು ಭಾಷೆಯ ಹಾಡುಗಳನ್ನ ಶ್ರೇಯಾ ಹಾಡಿದ್ದಾರೆ. ಕನ್ನಡದಲ್ಲಿ ಶ್ರೇಯಾ ಹಾಡಿದ ಮೊದಲ ಹಾಡಂದ್ರೆ ಮುಂಗಾರುಮಳೆ ಚಿತ್ರದ, ಅರಳುತಿರು ಜೀವದ ಗೆಳೆಯ ಹಾಡು. ಇದರೊಂದಿಗೆ ಹಲವು ಕನ್ನಡ ಸಿನಿಮಾಗಳ ಹಾಡಿಗೆ ಶ್ರೇಯಾ ಘೋಶಾಲ್ ಕಂಠದಾನ ಮಾಡಿದ್ದಾರೆ.
ಕೆಲವು ಸಂದರ್ಶನದಲ್ಲಿ ಮಾತನಾಡಿರುವ ಶ್ರೇಯಾ ಘೋಶಾಲ್, ಸಿನಿಮಾಗಳಲ್ಲಿ ಹಾಡುವುದರಿಂದ ಧ್ಯಾನ, ತಪಸ್ಸು ಮಾಡಿದ ಅನುಭವವಾಗುತ್ತದೆ. ಲೈವ್ ಕನ್ಸರ್ಟ್‌ಗಳಲ್ಲಿ ಹಾಡುವುದರಿಂದ ಹಾಡುಗಾರಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದೇನೆ ಎನ್ನುತ್ತಾರೆ.
ಈಕೆಯ ಬಗ್ಗೆ ಇರುವ ಮತ್ತೊಂದು ವಿಶೇಷ ಸಂಗತಿ ಅಂದ್ರೆ, ಭಾರತದಲ್ಲಷ್ಟೇ ಅಲ್ಲದೇ, ಶ್ರೇಯಾ ಅಮೇರಿಕದಲ್ಲೂ ತುಂಬಾ ಫೇಮಸ್ ಇದ್ದಾರೆ. ಎಷ್ಟರ ಮಟ್ಟಿಗೆ ಫೇಮಸ್ ಅಂದ್ರೆ ಅಮೇರಿಕದ ಓಹಿಯೋ ರಾಜ್ಯದಲ್ಲಿ ಜೂನ್ 26ರಂದು ಶ್ರೇಯಾ ಘೋಷಾಲ್ ದಿನವನ್ನಾಗಿ ಆಚರಿಸಲಾಗುತ್ತದೆ.
ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ತಮ್ಮ ಬಾಲ್ಯದ ಗೆಳೆಯನಾದ ಶೀಲಾದಿತ್ಯ ಮುಖ್ಯೋಪಾಧ್ಯಾಯ್ ಎಂಬುವರನ್ನ 2015, ಫೆಬ್ರವರಿ 5ರಂದು ವಿವಾಹವಾದರು.
ಭಾರತದಲ್ಲಿ ಶ್ರೇಯಾಳ ಕಂಠಕ್ಕೆ ಮನಸೋಲದವರೇ ಇಲ್ಲ. ಅಷ್ಟು ಸುಂದರ ಕಂಠ ಈ ಬೆಂಗಾಲಿ ಬೆಡಗಿಯದ್ದು. ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಗಾಯಕರಾಗಬೇಕಿದ್ದರೆ, ಸಿಕ್ಕಾಪಟ್ಟೆ ಕಷ್ಟಪಡಬೇಕು, ಹೀಗೆ ಕಷ್ಟಪಟ್ಟು ಗಾಯಕರಾಗಬೇಕಿದ್ರೆ, 30ರಿಂದ 40 ವರ್ಷ ಕಳೆದೇಹೋಗಿರುತ್ತದೆ ಎಂಬ ಕಾಲದಲ್ಲಿ, 16-17ರ ವಯಸ್ಸಿಗೆ ಬಾಲಿವುಡ್‌ನ ಫೇಮಸ್ ಸಿಂಗರ್ ಆಗಿ ಹೊರಹೊಮ್ಮಿದ್ದರು ಶ್ರೇಯಾ ಘೋಷಾಲ್.
Discussion about this post