ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದ ಭೂಮಿಯಲ್ಲಿ ಮಾತ್ರವೇ ಜೀವಿಗಳಿವೆ. ಇತರೆ ಸೌರವ್ಯೂಹಗಳಲ್ಲಿ, ಅವುಗಳ ಗ್ರಹಗಳಲ್ಲಿ ಜೀವವಿಕಾಸವಾಗಿ ಬುದ್ಧಿಜೀವಿಗಳು ಇರಬಹುದೇ ಎಂಬ ಪ್ರಶ್ನೆ ಇಂದು ನೆನ್ನೆಯದಲ್ಲ. ಸಾಕಷ್ಟು ವರ್ಷಗಳಿಂದ ಈ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಒಂದು ವೇಳೆ ಬೇರೆ ಸೌರವ್ಯೂಹದ ಗ್ರಹಗಳಲ್ಲಿ ಜೀವಿಗಳಿದ್ದರೆ, ಅವನ್ನು ಪತ್ತೆಹಚ್ಚುವುದು ಹೇಗೆ? ಗೆಲಿಲಿಯೋ ಎಂಬ ನೌಕೆ ಭೂಮಿಯಿಂದ ಹಾರಿ ಗುರುಗ್ರಹದ ಕಡೆಗೆ ಹೋಗುವಾಗ ಹಿಂದಿರುಗಿ ಭೂಮಿಯನ್ನು ನೋಡಿತು. ಬುದ್ಧಿಜೀವಿಗಳ ಅಸ್ತಿತ್ವವನ್ನು ತೋರಿಸುವ ಯಾವುದೇ ಸಾಕ್ಷಿಗಳೂ ಅದಕ್ಕೆ ದೊರೆಯಲಿಲ್ಲ. ಕೃತಕ ರೇಡಿಯೋ ತರಂಗಗಳು, ರೋಹಿತದಿಂದ ರಾಸಾಯನಿಕ ವಿಶ್ಲೇಷಣೆಗಳಿಂದ ಮಾತ್ರ ಬೇರೆ ಸೌರವ್ಯೂಹದ ಗ್ರಹಗಳಲ್ಲಿ ಜೀವಿಗಳಿರುವ ಸುಳಿವು ದೊರೆತಿದೆ. ಹಾಗಾದರೆ ಭೂಮಿಯಂತಹ ಚಿಕ್ಕ ಗ್ರಹವನ್ನು ಹುಡುಕುವುದು ಮತ್ತು ಅದರಲ್ಲಿ ಬುದ್ಧಿಜೀವಿಗಳ ಚಟುವಟಿಕೆಯನ್ನು ಗುರುತಿಸುವುದುಅದೆಷ್ಟು ಕಷ್ಟ ಎಂದು ತಿಳಿಯಿತಲ್ಲವೇ?
ಸಂಶೋಧಕರು ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಲಿಲ್ಲ. ಭೂಮಿಯ ಮೇಲೆ ಜೀವದ ಉತ್ಪತ್ತಿಯ ಮೂಲವನ್ನು ಕಂಡುಹಿಡಿದು, ಅದರ ಸುಳಿವನ್ನು ಭೂಮಿಯಿಂದ ಆಚೆಗೂ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಜೀವದ ಮೂಲಕಣಗಳಿದ್ದರೆ ಸಾಲದು. ಅವುಗಳ ರೂಪಾಂತರವೂ ಅವಶ್ಯವಲ್ಲವೇ? ಇದಕ್ಕೆ ಗ್ರಹಗಳ ಮೇಲ್ಮೈನಲ್ಲಿರುವ ರಾಸಾಯನಿಕಗಳು ಮೂಲ ಸಾಮಗ್ರಿಗಳನ್ನು ಒದಗಿಸಬಲ್ಲವು. ಇದರಿಂದ ಹೆಚ್ಚಿನ ವೈವಿಧ್ಯತೆ, ವಿಕಾಸ ತಿಳಿಯಲು ಸಾಧ್ಯ. ಇಂದಿನ ವೈಜ್ಞಾನಿಕ ಯುಗದವರೆಗಿನ ಅವಧಿ ಕೇವಲ ಒಂದು ಭಾಗ ಎನಿಸಿಕೊಳ್ಳುತ್ತದೆ. ಈ ಪ್ರಗತಿಗೆ ಇಲ್ಲಿಯ ಪರಿಸರವೂ ಕಾರಣವಿರಬಹುದು. ಇದೇ ರೀತಿಯ ಪ್ರಗತಿ ಬೇರೊಂದು ಗ್ರಹದಲ್ಲಿ ಇದೇ ಪರಿಸರದಲ್ಲಿ ಉಂಟಾಗುತ್ತಿತ್ತೆ ಎಂಬುದರ ಬಗ್ಗೆ ವಿವಿಧ ರೀತಿಯ ವಿಶ್ಲೇಷಣೆಗಳಿವೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹೊರ ಜಗತ್ತಿನಲ್ಲಿ ಜೀವಿಗಳು ಇದ್ದೇ ಇರಬೇಕು ಎನ್ನುವ ವಿಜ್ಞಾನಿಗಳಿದ್ದಾರೆ. ಆದರೆ ಆ ಜೀವಿಗಳು ವಿಕಾಸದ ಯಾವ ಹಂತದಲ್ಲಿದ್ದಾರೆ ಎಂಬುದು ಇಲ್ಲಿ ಮುಖ್ಯ. ಒಂದು ವೇಳೆ ಅವರು ನಮಗಿಂತ ತಂತ್ರಜ್ಞಾನದಲ್ಲಿ ತುಂಬಾ ಮುಂದಿದ್ದಾರೆಂದರೆ, ಅವರು ನಮ್ಮನ್ನು ತಲುಪಲು 100 ರಿಂದ 1000 ವರ್ಷಗಳೇ ಬೇಕಾಗಬಹುದು.
ಈ ದಿಸೆಯಲ್ಲಿ ಬೇರೆ ಹೊರ ಜಗತ್ತಿನಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನವನ್ನು 1974 ರಲ್ಲಿ ಮಾಡಲಾಯಿತು. “ARESIBO” ರೇಡಿಯೋ ವೀಕ್ಷಣಾಲಯದಿಂದ ಅತ್ಯಂತ ಶಕ್ತಿಶಾಲಿಯಾದ ಸಂದೇಶವನ್ನು ಕಳುಹಿಸಲಾಯಿತು. ಅದನ್ನುM13 ಎಂಬ ಗೋಳಾಕಾರದ ನಕ್ಷತ್ರಗಳ ಗುಂಪಿನ ಕಡೆಗೆ ಕಳುಹಿಸಲಾಯಿತು. ಒಂದು ವೇಳೆ ಈ ಸಂದೇಶ 25000 ವರ್ಷಗಳ ನಂತರ ಆ ನಕ್ಷತ್ರಪುಂಜವನ್ನು ತಲುಪಬಹುದು. ಬಹುಶಃ ಅಲ್ಲಿಂದ, ಅಂದರೆ ಅಲ್ಲಿ ಬುದ್ಧಿಜೀವಿಗಳಿದ್ದು, ಉತ್ತರವನ್ನು ಕಳುಹಿಸಿದಲ್ಲಿ 50000 ವರ್ಷಗಳನಂತರ ನಮ್ಮನ್ನು ತಲುಪಬಹುದು! ನಮ್ಮ ಸೌರವ್ಯೂಹದಿಂದ ಹೊರಗೆ ಹೊರಟಿರುವ ವಾಯೇಜರ್ ನೌಕೆಯಲ್ಲಿಯೂ ಒಂದು ಸಂದೇಶದ ಫಲಕ, ಧ್ವನಿಮುದ್ರಿತ ಸಂದೇಶ, ರೇಡಿಯೋತರಂಗಗಳ ಸಂದೇಶವನ್ನೂ ಅಳವಡಿಸಲಾಗಿದೆ. ಇದು ಎಂದಾದರೂ ಯಾವುದಾದರೂ ಬುದ್ಧಿಜೀವಿಗಳನ್ನು ತಲುಪಬಹುದು ಎಂಬುದೇ ಇದರ ಉದ್ದೇಶ.
ನಮ್ಮ ಭೂಮಿಗೂ ಹೀಗೆ ಯಾರಾದರೂ ಅಂದರೆ ಬೇರೆ ಜಗತ್ತಿನ ಜೀವಿಗಳಿಂದ ಸಂದೇಶಗಳನ್ನು ರವಾನಿಸಿರಬಹುದಲ್ಲವೇ?ಇದನ್ನು ಆಲಿಸುವ ಸಲುವಾಗಿ “SETI” ಅಂದರೆ ಸರ್ಚ್ ಫಾರ್ ಎಕ್ಸ್ಟ್ರಾಟೆರೆಸ್ತ್ರಿಯಲ್ ಇಂಟೆಲಿಜೆನ್ಸ್ ಎಂಬ ಕಾರ್ಯಕ್ರಮ ಆರಂಭವಾಯಿತು. ಇದೇ ರೀತಿ ಸಂದೇಶಗಳನ್ನು ನಿಯತವಾಗಿ ಕಳುಹಿಸುವ ಮತ್ತೊಂದು ಕಾರ್ಯಕ್ರಮವೂ ಇತ್ತೀಚಿಗೆ ಆರಂಭವಾಯಿತು. ಭೂಮಿಯಿಂದ ಹೊರಗೆ ತಪ್ಪಿಸಿಕೊಂಡು ಹೋಗುವ ರೇಡಿಯೋ ತರಂಗಗಳನ್ನು “ಗೆಲಿಲಿಯೋ” ನೌಕೆ ಗುರುತಿಸಿದಂತೆ, ಇನ್ನೊಂದು ಬುದ್ಧಿಜೀವಿಗಳ ಗ್ರಹದಿಂದ ತಪ್ಪಿಸಿಕೊಂಡು ಬರುವ ಕ್ಷೀಣ ತರಂಗಗಳನ್ನು ಪತ್ತೆಮಾಡುವ ಕಾರ್ಯವೂ ನಡೆದಿದೆ. ಆದರೆ ಇವುಗಳ ಫಲಿತಾಂಶ ಹೇಗಿರಬಹುದು ಎಂಬುದು ಮಾತ್ರ ಇದುವರೆಗೂ ತಿಳಿದಿಲ್ಲ. ನಮ್ಮ ಜೀವಿತದ ಅವಧಿಯಲ್ಲಿ ಇಂತಹ ಒಂದು ಸಂದೇಶ ಬಂದಿದ್ದಾದರೆ…….ಅದು ನಮ್ಮ ಅದೃಷ್ಟವಲ್ಲದೆ ಮತ್ತೇನು!
ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ
Discussion about this post