ಬೆಂಗಳೂರು: ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತು ಅನಿಲ್ ಲಾಡ್ ಅವರ ಹೇಳಿಕೆಗಳನ್ನು ಖಂಡಿಸಿ ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅವರನ್ನು ತಕ್ಷಣ ಬಂಧಿಸಲು ಒತ್ತಾಯಿಸಲಾಗಿದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದರು.
ಪೊಲೀಸ್ ಠಾಣೆಯ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಲಿತರಿಗೆ ಅವಮಾನ, ಸಂವಿಧಾನಕ್ಕೆ ಅಗೌರವ ತೋರಿದ ಇವರಿಬ್ಬರ ಹೇಳಿಕೆಗಳ ವಿರುದ್ಧ ಪಕ್ಷವು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು. ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಲಾಗಿತ್ತು. ಸಂವಿಧಾನ ದಿನಾಚರಣೆಯನ್ನು ಟಿಎಂಸಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದ ನೇತೃತ್ವದ ನೇತೃತ್ವದಲ್ಲಿ ಬಹಿಷ್ಕರಿಸಿದ ಕ್ರಮವು ಡಾ. ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಅವರು ಖಂಡಿಸಿದರು.
ಸಿದ್ದರಾಮಯ್ಯನವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದ್ದು, ಇದು ದಲಿತ ವಿರೋಧಿ ಕಾಯ್ದೆಯ ಅಡಿಯಲ್ಲಿ ಬರುವ ಕಾರಣ ಅವರ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿ ನಾವು ಇವತ್ತು ದೂರು ದಾಖಲಿಸಿದ್ದೇವೆ. ಇದು ನಡೆದು ಒಂದು ತಿಂಗಳಾಗಿದೆ. ನಾವು ಪ್ರತಿಭಟನೆ ನಡೆಸಿ ಕ್ಷಮೆ ಕೇಳಲು ಒತ್ತಾಯಿಸಿದ್ದೇವೆ. ಇಲ್ಲಿವರೆಗೆ ಕಾದು ನೋಡಿದೆವು. ಆದರೆ, ಸಿದ್ದರಾಮಯ್ಯನವರು, ಇವರು ನನ್ನ ವಿಡಿಯೋ ತಿರುಚಿದ್ದಾರೆ ಎಂದು ಜನರ ಮಧ್ಯದಲ್ಲಿ ಹೇಳಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯರ ಹೇಳಿಕೆ ಪರಿಶಿಷ್ಟ ಪರಿಶಿಷ್ಟ ಜಾತಿ ನಿಂದನಾ ಕಾಯ್ದೆಯಡಿ ಬರುವ ಕಾರಣ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲು ಆಗ್ರಹಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮಾಜಿ ಶಾಸಕರಾದ ಅನಿಲ್ ಲಾಡ್ ಅವರು ತಮ್ಮ ಮನೆಯಲ್ಲಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪರಿಶಿಷ್ಟ ಜಾತಿಯ ಎಡಗೈ, ಬಲಗೈ ಇರಬಹುದು. ಅವರು ಕಾಂಗ್ರೆಸ್‍ನಲ್ಲೇ ಇರಬೇಕು. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲ ಸವಲತ್ತುಗಳನ್ನು ಕೊಟ್ಟಿದೆ ಎಂದು ತಿಳಿಸಿದ್ದಾರೆ.
ಅವರು ಮುಂದುವರಿದು “ಈ ದೇಶಕ್ಕೆ ಸಂವಿಧಾನ ಕೊಟ್ಟವರು ಶ್ರೀಮತಿ ಇಂದಿರಾಗಾಂಧಿ, ದಿವಂಗತ ರಾಜೀವ್ ಗಾಂಧಿ ಮತ್ತು ಈಗ ಇರುವ ಶ್ರೀ ರಾಹುಲ್ ಗಾಂಧಿ ಅವರು” ಎಂದು ತಿಳಿಸಿದ್ದಾರೆ. ಇದೊಂದು ದೊಡ್ಡ ಅಪರಾಧ. ಈ ದೇಶದ ಸಂವಿಧಾನವನ್ನೇ ಬರೆದವರ ಹೆಸರಿಗೆ ಅಪಮಾನ. ಸಂಸತ್ತಿಗೆ, ಜನಾಂಗಗಳಿಗೆ, ಪರಿಶಿಷ್ಟ ಜಾತಿ, ವರ್ಗಗಳಿಗೆ ಅವಮಾನ ಮಾಡಿದ್ದರಿಂದ ಇದನ್ನೂ ಕೂಡ ಸೆಕ್ಷನ್ 3 (ಆರ್) ಮತ್ತು ಸೆಕ್ಷನ್ 3 (ಬಿ) ಒಳಗಡೆ ಐಪಿಸಿ ಕಾಯ್ದೆಯಲ್ಲಿ ದೂರು ನೀಡಿದ್ದೇವೆ. ಅವರನ್ನು ತಕ್ಷಣ ಬಂಧಿಸಲು ಒತ್ತಾಯಿಸಿದ್ದೇವೆ ಎಂದು ಮನವಿ ಮಾಡಿದ್ದೇವೆ ಎಂದರು. ಈಗಾಗಲೇ ಪ್ರಿಯಾಂಕ ಗಾಂಧಿ ಅವರೂ ಬಂದಿದ್ದಾರೆ. ಅವರ ಹೆಸರನ್ನು ಸೇರಿಸಲು ಮರೆತಿದ್ದಾರಾ ಎಂದು ಕೇಳಿದರು.
ಇಂಥ ಅಪಹಾಸ್ಯ ಮಾಡುವವರ ವಿರುದ್ಧ ಕ್ರಮ ಅತ್ಯಗತ್ಯ. ಈ ಅಪಮಾನವನ್ನು ಖಂಡಿಸಿ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ರಾಜ್ಯದಾದ್ಯಂತ ಆಂದೋಲನ ನಡೆಸಲಾಗುವುದು ಎಂದು ಅವರು ತಿಳಿಸಿದರು. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಮಿಟ್ಟಲ್ ಕೋಡ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿವೇಕ್ ರೆಡ್ಡಿ, ಎಂ.ಸಿ.ಎ ಅಧ್ಯಕ್ಷರಾದ ಮುನಿಕೃಷ್ಣ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ. ನಾರಾಯಣ್, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ವೆಂಕಟೇಶ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತು ಮುಖಂಡರು ದೂರು ನೀಡುವ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್
Discussion about this post