ಬಾಲಿವುಡ್ನ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿತನಾಗಿರುವ ವಿಹಾರ ನೌಕೆಯಲ್ಲಿ ರೇವ್ ಪಾರ್ಟಿನಡೆಸಿ ಡ್ರಗ್ಸ್ ಸೇವಿಸಿದ ಹೈಪ್ರೊಫೈಲ್ ಪ್ರಕರಣದಲ್ಲಿ ಹೊಸ ತಿರುವುಗಳು ಗೋಚರಿಸಿವೆ.
ಮುಂಬೈ: ವಿಹಾರ ನೌಕೆಯಲ್ಲಿ ಅಕ್ಟೋಬರ್ 2ರಂದು ರೇವ್ ಪಾರ್ಟಿ ನಡೆಸಿ ಮಾದಕವಸ್ತು ಸೇವಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಿಡುಗಡೆ ಮಾಡಬೇಕಿದ್ದರೆ 25 ಕೋಟಿ ರೂ. ಹಣ ನೀಡುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಅಧಿಕಾರಿಗಳು ಕೇಳಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಮಹಾಜರು ಮಾಡುವಾಗ ಖಾಲಿ ಹಾಳೆಗಳಿಗೆ ಸಹಿ ತೆಗೆದುಕೊಂಡಿದ್ದಾರೆ ಎಂದು ಖಾಸಗಿ ಪತ್ತೆದಾರರಾದ ಕೆ.ಪಿ.ಗೋಸಾವಿಯವರ ಅಂಗರಕ್ಷಕನೆಂದು ಹೇಳಿಕೊಂಡ ಮತ್ತು ಈ ಪ್ರಕರಣದಲ್ಲಿ ಪಂಚನಾಮೆದಾರರಾಗಿರುವ ಪ್ರಭಾಕರ ಸೈಲ್ ಎಂಬುವವರು ಆರೋಪಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಅವರು ಕೋರ್ಟ್ಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ.
ಈ ಮಧ್ಯೆ, ಕೆ.ಪಿ.ಗೋಸಾವಿ ಕಣ್ಮರೆಯಾಗಿದ್ದು, ಇಡೀ ಪ್ರಕರಣ ಅಯೋಮಯವಾಗಿದೆ. ಜೀವಭಯದ ಕಾರಣ ಅವರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಪ್ರಭಾಕರ ಮಾಡಿರುವ ಎಲ್ಲಾ ಆರೋಪಗಳನ್ನು ಎನ್ಸಿಬಿ ತಳ್ಳಿಹಾಕಿದೆ. ಅವರು ಹೇಳುವಂತೆ ಹಣ ತೆಗೆದುಕೊಂಡಿದ್ದರೆ ಆರೋಪಿಗಳು ಇನ್ನೂ ಜೈಲಿನಲ್ಲಿ ಇರುತ್ತಿದ್ದರೆ ಎಂದು ಹೇಳಿದೆ.
ಪ್ರಭಾಕರ ಸೈಲ್ ಮಾಡಿರುವ ಆರೋಪ ಇವು: “ಆರ್ಯನ್ ಖಾನ್ ಜೈಲಿನಿಂದ ಹೊರಬರಬೇಕಿದ್ದರೆ ಅವನ ತಂದೆ ಶಾರುಖ್ ಖಾನ್ 25 ಕೋಟಿ ರೂಪಾಯಿ ಕೊಡಬೇಕು. ಇದರಲ್ಲಿ 8 ಕೋಟಿ ರೂಪಾಯಿಯನ್ನು ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಖೆಂಡೆ ಪಾಲಾಗಿದೆ. ಈ ಬೇಡಿಕೆ ಸಂಬಂಧವಾಗಿ ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿಯವರನ್ನು ನಾನು ಭೇಟಿಯಾಗಿದ್ದೆ’ ಎಂದು ಪ್ರಭಾಕರ ಸೈಲ್ ಮಾಧ್ಯಮದವರಿಗೆ ಹೇಳಿದ್ದಾರೆ.
“ನನಗೆ ಉದ್ಯೋಗ ನೀಡಿರುವ ಕೆ.ಪಿ.ಗೋಸಾವಿ ಅವರು ಸ್ಯಾಮ್ ಡಿಸೋಜಾ ಎಂಬುವರೊಂದಿಗೆ ಲಂಚದ ಬೇಡಿಕೆ ಬಗ್ಗೆ ಕಾರಿನಲ್ಲಿದ್ದಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಇದಾದ ನಂತರ ಎರಡು ಬ್ಯಾಗ್ ನೀಡಿ (38 ಲಕ್ಷ ರೂ. ಹಣ ಇತ್ತು) ಡಿಸೋಜಾಗೆ ಕೊಟ್ಟುಬರುವಂತೆ ನನಗೆ ಹೇಳಿದರು. ಟ್ರೆಡೆಂಟ್ ಹೋಟೆಲ್ನಲ್ಲಿ ಡಿಸೋಜಾರನ್ನು ಭೇಟಿಯಾಗಿ ಬ್ಯಾಗ್ ತಲುಪಿಸಿದೆ’ ಎಂದು ಲಂಚದ ಬೇಡಿಕೆ ಕುರಿತ ಮಾಹಿತಿಯನ್ನು ಪ್ರಭಾಕರ ವಿವರಿಸಿದ್ದಾರೆ.
“ಎನ್ಸಿಬಿ ಅಧಿಕಾರಿಗಳುವಿಹಾರದ ಜಹಜಿನಲ್ಲಿ (ಅ.2) ಪ್ರಯಾಣಿಕರ ಸೋಗಿನಲ್ಲಿ ಬಂದು ದಾಳಿ ಮಾಡಿದಾಗ ನಾನು ಮತ್ತು ನನ್ನ ಬಾಸ್ ಕೂಡ ಅಲ್ಲಿದ್ದೆವು. ಹಡಗಿನ ಬೋರ್ಡಿಂಗ್ ಪ್ರದೇಶದಲ್ಲಿ ನಾನಿದ್ದೆ. ಹೀಗಾಗಿ ಆರ್ಯನ್ ಖಾನ್ ಇನ್ನಿತರು ಹಡಗಿಗೆ ಏರಿದನ್ನು ಕಂಡಿರುವೆ. ಆರೋಪಿಗಳನ್ನು ವಶಕ್ಕೆ ಪಡೆದ ಮೇಲೆ ನೌಕೆಯಿಂದ ಹೊರಡುವುದಕ್ಕೂ ಮುನ್ನ ಪಂಚನಾಮೆಗೆ ಸಂಬಂಧಿಸಿದ 10 ಖಾಲಿ ಪೇಪರ್ ಮೇಲೆ ನನಗೆ ಸಹಿ ಮಾಡುವಂತೆ ಎನ್ಸಿಬಿ ಅಧಿಕಾರಿಗಳು ಹೇಳಿದರು. ನಾನು ಗೋಸಾವಿಯವರ ಕಡೆಗೆ ಆಶ್ಚರ್ಯದಿಂದ ನೋಡಿದೆ. ಆದರೆ, ಅವರು ಕೂಡ ಸಹಿ ಮಾಡುವಂತೆ ಸೂಚಿಸಿದರು’ ಎಂದು ಪ್ರಭಾಕರ ಹೇಳಿದ್ದಾರೆ.
ತನಿಖೆಗೆ ರಾವತ್ ಆಗ್ರಹ
ವಿಹಾರ ನೌಕೆಯಲ್ಲಿನ ಡ್ರಗ್ಸ್ ಕೇಸ್ನ ಮಹಾಜರು ಪ್ರಕ್ರಿಯೆಯಲ್ಲಿ ಸಾಕ್ಷಿದಾರರಿಂದ ಖಾಲಿ ಹಾಳೆ ಮೇಲೆ ಸಹಿ ಪಡೆದಿರುವುದು ಆಘಾತಕಾರಿ ಬೆಳವಣಿಗೆ. ಆರ್ಯನ್ ಖಾನ್ನನ್ನು ಬಿಟ್ಟುಬಿಡಲು ಎನ್ಸಿಬಿ ಅಧಿಕಾರಿಗಳು ಲಂಚದ ಬೇಡಿಕೆ ಇರಿಸಿರುವ ಆರೋಪವೂ ಕೇಳಿಬಂದಿದೆ.
ಈ ಪ್ರಕರಣವು ಮಹಾರಾಷ್ಟ್ರದ ಹೆಸರನ್ನು ಹಾಳುಮಾಡಲು ಮಾಡಿರುವಂತಹ ಪಿತೂರಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದರಲ್ಲಿ ಸತ್ಯಾಂಶ ಇದೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶಿವಸೇನೆಯ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

























Discussion about this post