ಮೈಸೂರು: ನಗರದ ಚಾಮುಂಡಿಬೆಟ್ಟದಲ್ಲಿರುವ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ದಸರಾದ ಶರನ್ನವರಾತ್ರಿಯ ದಿನಗಳಲ್ಲಿ ಮೂರು ಪಟ್ಟು ಆದಾಯ ಬಂದಿದೆ. ಇದಕ್ಕೆ ಕಾರಣ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹೆಚ್ಚಾಗಿ ಭೇಟಿ ನೀಡಿ ತಾಯಿಯ ದರುಶನ ಪಡೆದಿರುವುದು.
ಚಾಮುಂಡಿ ಬೆಟ್ಟಕ್ಕೆ ಅಕ್ಟೋಬರ್ 7 ರಿಂದ 15ರವರೆಗೆ 74,480 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ 40.11 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಇದು ಕಳೆದ ಬಾರಿಗಿಂತ ಮೂರು ಪಟ್ಟು ಹೆಚ್ಚು ಆದಾಯವಾಗಿದೆ.
ಕಳೆದ ವರ್ಷ ಅಕ್ಟೋಬರ್ 7 ರಿಂದ 15 ರವರೆಗೆ 9,825 ಮಂದಿ ಬೆಟ್ಟಕ್ಕೆ ಭೇಟಿ ನೀಡಿದ್ದು, 6.6 ಲಕ್ಷ ರೂ. ಸಂಗ್ರಹವಾಗಿತ್ತು.
ಅಕ್ಟೋಬರ್ 7 ರಂದು 1500 ಮಂದಿ ಭೇಟಿ ನೀಡಿದರೆ, ಅ.8 ರಂದು 1,500, ಅ.9 ರಂದು 2,735, ಅ.10 ರಂದು 8,463, ಅ.11 ರಂದು 13,350, ಅ.12 ರಂದು 6,907, ಅ.13 ರಂದು 8,707, ಅ.14 ರಂದು 5,307 ಹಾಗೂ ವಿಜಯದಶಮಿಯಂದು 20,703 ಮಂದಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದರು.
ಲಾಕ್ಡೌನ್ ತೆರವಿನ ನಂತರ ಕಳೆದ ಮೂರು ತಿಂಗಳಲ್ಲಿ ಮೈಸೂರಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಅಲ್ಲದೇ ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಕಾರಣದಿಂದಾಗಿ ಆದಾಯ ಹೆಚ್ಚಾಗಿದೆ.

























Discussion about this post