ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಒಟ್ಟು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಮಾಹಿತಿ ನೀಡಿದ್ದಾರೆ.
15 ಸಾವಿರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನೂ ಅವರು ‘ಕೂ’ ಸಂದೇಶದ ಜತೆ ಲಗತ್ತಿಸಿದ್ದಾರೆ. ಅವುಗಳು ಹೀಗಿವೆ;
* ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಪದವೀಧರ ಪ್ರಾಥಮಿಕ ಶಾಲಾ (6ರಿಂದ 8) ಶಿಕ್ಷಕರ 10 ಸಾವಿರ ಹುದ್ದೆಗಳ ಭರ್ತಿ.
* ಕಲ್ಯಾಣ ಕರ್ನಾಟಕ ವೃಂದದ ಪದವೀಧರ ಪ್ರಾಥಮಿಕ ಶಾಲಾ ( 6ರಿಂದ 8) ಶಿಕ್ಷಕರ 5 ಸಾವಿರ ಹುದ್ದೆಗಳ ಭರ್ತಿ.
* ಕೆಲ ದಿನಗಳಲ್ಲೇ ನೇಮಕ ಪ್ರಕ್ರಿಯೆ ಅಧಿಸೂಚನೆ ಹೊರಡಿಸಲಾಗುತ್ತದೆ.
* ಶಿಕ್ಷಕರ ಕೊರತೆ ನೀಗಿಸಿ ಶಿಕ್ಷಣದ ಗುಣಮಟ್ಟ ಕಾಪಾಡಲು ಈಗಾಗಲೇ 23 ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತಿದ್ದು, ಹೆಚ್ಚುವರಿಯಾಗಿ 4 ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆಯಲು ನಿರ್ಧಾರ ಮಾಡಲಾಗಿದೆ.
Discussion about this post