ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣಾ ಮತದಾನ ಅಂತ್ಯವಾಗಿದ್ದು, ದಿನದಂತ್ಯಕ್ಕೆ ದಾಖಲೆಯ ಶೇ.99.8ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ 20 ಚುನಾವಣಾ ಕ್ಷೇತ್ರಗಳಿಂದ ಒಟ್ಟು 25 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ಒಟ್ಟು 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದಾರೆ. ಬೆಳಗ್ಗೆ 8ರಿಂದಲೇ ಮತದಾನ ಆರಂಭವಾಗಿ, ಸಂಜೆ 4 ಗಂಟೆವರೆಗೂ ನಡೆಯಿತು.
ಇಂದಿನ ಮತದಾನ ಪ್ರಕ್ರಿಯೆಯಲ್ಲಿ ದಾಖಲೆಯ ಶೇ.99.8ರಷ್ಟು ಮತದಾನವಾಗಿದ್ದು, ಇದು 2015 ಚುನಾವಣೆಯ ಮತದಾನಕ್ಕೆ ಹೋಲಿಸಿದರೆ ಶೇ.0.2ರಷ್ಟು ಏರಿಕೆಯಾಗಿದೆ. ಬಹುತೇಕ ಎಲ್ಲಾ ಚುನಾವಣಾ ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದ್ದು, ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 99.9 ಶೇಕಡಾ ಮತ್ತು ವಿಜಯಪುರದಲ್ಲಿ ಅತಿ ಕಡಿಮೆ ಶೇಕಡಾ 99.55 ರಷ್ಟು ಮತದಾನವಾಗಿದೆ.
ಬೆಂಗಳೂರು ನಗರರದಲ್ಲಿ 2,073 ಮತದಾರರ ಪೈಕಿ 2,070 ಸದಸ್ಯರು ತಮ್ಮ ಹಕ್ಕು ಚಲಾಯಿಸುವುದರೊಂದಿಗೆ ಶೇ.99.86 ರಷ್ಟು ಮತದಾನವಾಗಿದೆ. ಈ ಕ್ಷೇತ್ರವು ಕದನ ಕುತೂಹಲ ಕೆರಳಿಸಿದ್ದು ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಎಂದೇ ಖ್ಯಾತಿ ಗಳಿಸಿರುವ ಯೂಸುಫ್ ಷರೀಫ್ ಅವರು ಸ್ಪರ್ಧಿಸಿದ್ದಾರೆ. ಈ ಹಿಂದೆ ಇದೇ ಯೂಸುಫ್ ಷರೀಫ್ ಅವರು 1,744 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಬಿಜೆಪಿಯ ಗೋಪಿನಾಥ್ ರೆಡ್ಡಿ ಅವರು 34 ಕೋಟಿ ರೂಪಾಯಿಗಳನ್ನು ತಮ್ಮ ನಿವ್ವಳ ಆಸ್ತಿ ಎಂದು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್ ಸೇರಿದಂತೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಪದನಿಮಿತ್ತ ಸದಸ್ಯರಾಗಿ ಅಧಿಕಾರ ಚಲಾಯಿಸಿದರು. ಆದಾಗ್ಯೂ, ಬಿಬಿಎಂಪಿ ಸಂಸ್ಥೆ ಅಸ್ತಿತ್ವದಲ್ಲಿಲ್ಲದ ಕಾರಣ ಸಂಸದರು ಮತ್ತು ಶಾಸಕರು ಸೇರಿದಂತೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳು ತಮ್ಮಮತ ಹಕ್ಕು ಕಳೆದುಕೊಂಡರು.
ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶಕ್ಕಾಗಿ ರಾಜಕೀಯ ವಲಯ ಕುತೂಹಲದಿಂದ ಕಾಯುತ್ತಿದೆ.
Legislative Council Elections:

























Discussion about this post