Sakaleshapura News: ಇಂದಿನ ಕಾಲದಲ್ಲಿ ನಿಯತ್ತು, ಪ್ರಾಮಾಣಿಕತೆ ಇರುವ ಜನರನ್ನು ಕಾಣೋದು ತುಂಬಾನೇ ಅಪರೂಪ. ಅಂಥ ಅಪರೂಪದಲ್ಲೇ ಅಪರೂಪದ ಕೇಸ್ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಇದು ಬರೀ ಪ್ರಾಮಾಣಿಕತೆ ಮೆರೆದವರ ಸುದ್ದಿಯಲ್ಲ ಬದಲಾಗಿ, ಪವಾಡವೇ ಅನ್ನಿಸುವಂಥ ಸುದ್ದಿ.
ಮಂಗಳೂರಿನ ಬಂಟ್ವಾಳ ತಾಲೂಕಿನ ಕುರಿಯಾಳ ಸೋಮಯಾಜಿ ಕುಟುಂಬದವರು ಕುಂಭ ಮೇಳಕ್ಕೆ ಹೋಗಲು ಅಣಿಯಾಗಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ. ಅಲ್ಲಿಂದ ಕುಂಭ ಮೇಳಕ್ಕೆ ಹೋಗಬೇಕಿತ್ತು. ಈ ವೇಳೆ ಮಂಗಳೂರಿನಿಂದ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ ಇವರು, ದಾರಿಮಧ್ಯೆ ಉಪಹಾರಕ್ಕಾಗಿ, ಸಕಲೇಶಪುರ ಹೆದ್ದಾರಿಯಲ್ಲಿ ಇರುವ ಪಾಕ ಕೇಂದ್ರ ಹೊಟೇಲ್‌ಗೆ ಹೋಗಿದ್ದಾರೆ.
ಅಲ್ಲಿ ಕಾಫಿ, ತಿಂಡಿ ಸೇವಿಸಿ ಮತ್ತೆ ಬೆಂಗಳೂರಿಗೆ ಹೊರಟಿದ್ದರು. ಆದರೆ ಹಾಸನ ಹೋಗುವ ವೇಳೆ ಅವರ ಜೊತೆಯಲ್ಲಿದ್ದ ಮಗುವಿನ ಕೊರಳಿನಲ್ಲಿದ್ದ ಬಂಗಾರದ ಸರ ಬಿದ್ದು ಹೋಗಿತ್ತು. ಸಕಲೇಶಪುರದಿಂದ ಹಾಸನಕ್ಕೆ ಬರುವ ಮಾರ್ಗಮಧ್ಯೆ ಶೌಚಕ್ಕೆಂದು ನಿಲ್ಲಿಸಿದ್ದಾಗ, ಮಗುವಿನ ಸರ ಬಿತ್ತು ಎಂದು ತಿಳಿದ ಕುಟುಂಬಸ್ಥರು. ಮತ್ತೆ ಶೌಚಕ್ಕಾಗಿ ನಿಲ್ಲಿಸಿದ ಜಾಗಕ್ಕೆ ಹೋಗಿ, ಸರ ಹುಡುಕಿದ್ದಾರೆ. ಆದರೆ ಸರ ಸಿಗಲಿಲ್ಲ. ಹೊಟೇಲ್‌ನಲ್ಲಿ ಬಿದ್ದಿರಬಹುದು. ಆದರೆ ಕೇಳಿದರೆ ಚಿನ್ನದ ಸರ ಕೊಡುವವರ್ಯಾರು..? ಇಂದಿನ ಕಾಲದಲ್ಲಿ ಯಾರಷ್ಟು ಪ್ರಾಮಾಣಿಕರಾಗಿರ್ತಾರೆ ಎಂದು ತಿಳಿದು, ಚಿನ್ನದ ಸರದ ಆಸೆ ಬಿಟ್ಟು ಬೆಂಗಳೂರಿಗೆ ಹೊರಟಿದ್ದಾರೆ.
ಕುಂಬ ಮೇಳಕ್ಕೆ ಹೋಗಿ ಬಂದು, ಪುನಃ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ, ಮತ್ತೊಮ್ಮೆ ಪಾಕ ಕೇಂದ್ರಕ್ಕೆ ಕಾಫಿ ಸೇವನೆಗೆಂದು ಸೋಮಯಾಜಿಯವರ ಕುಟುಂಬ ಹೋಗಿದೆ. ಅಲ್ಲೇ ಯಾರಿಗಾದರೂ ಚಿನ್ನದ ಸರ ಸಿಕ್ಕಿರಬಹುದು ಎಂಬ ಆಸೆ ಇನ್ನೂ ಅವರಲ್ಲಿ ಮನೆ ಮಾಡಿತ್ತು. ಹಾಗಾಗಿ ಕೊನೆಯ ಪ್ರಯತ್ನವಾಗಿ, ಹೊಟೇಲ್ ಸಿಬ್ಬಂದಿಗಳ ಬಳಿ ಕೇಳಿಬಿಡೋಣವೆಂದು, ನಮ್ಮ ಮಗುವಿನ ಸರ ಸಿಕ್ಕಿದೆಯಾ ಎಂದು ಕೇಳಿದ್ದಾರೆ.
ವಿಚಾರಿಸಿ ನೋಡುತ್ತೇವೆ ಎಂದು ಹೇಳಿದ ಸಿಬ್ಬಂದಿಗಳು, ಕೆಲ ಕ್ಷಣಗಳಲ್ಲೇ ಚಿನ್ನದ ಸರವನ್ನು ತಂದು ಒಪ್ಪಿಸಿದ್ದಾರೆ. ಫೆಬ್ರವರಿ 17ರ ಸಂಜೆ ಸರ ಕಳೆದು ಹೋಗಿತ್ತು. ಫೆಬ್ರವರಿ 21ರಂದು ಚಿನ್ನ ಕಳೆದುಕೊಂಡವರಿಗೆ, ಪಾಕ ಕೇಂದ್ರದ ಸಿಬ್ಬಂದಿ ಸರ ನೀಡಿದ್ದಾರೆ. ಅಂದ್ರೆ 4 ದಿನಗಳ ಕಾಲವಿದ್ದರೂ, ಅದನ್ನು ಬಳಸದೇ, ಇಟ್ಟುಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ. ಸತ್ಯಕ್ಕೂ ಇದೊಂದು ರೀತಿಯ ಪವಾಡವೇ ಎಂದು ಸರ ಮರಳಿ ಪಡೆದವರು ಹೇಳಿದ್ದಾರೆ.
ಸೋಮಯಾಜಿಯವರಿಗೆ ಈ ಬಗ್ಗೆ ಕೇಳಿದಾಗ, ಇಂದಿನ ಕಾಲದಲ್ಲಿ ಇಷ್ಟು ಪ್ರಾಮಾಣಿಕ ವ್ಯಕ್ತಿಗಳು ಸಿಗೋದು ತುಂಬಾನೇ ಅಪರೂಪ. ಪಾಕ ಕೇಂದ್ರ ಹೊಟೇಲ್ ಸಿಬ್ಬಂದಿಗಳ ಪ್ರಾಮಾಣಿಕತೆ ನಿಜಕ್ಕೂ ಮೆಚ್ಚುವಂಥದ್ದು. ಹೊಟೇಲ್‌ನಲ್ಲಿ ಸರ ಕಳೆದುಹೋಗಿದ್ದರೂ, ಸಿಗುವುದು ಡೌಟ್. ಸಿಕ್ಕರೂ ಈ ಕಾಲದಲ್ಲಿ ಯಾರು ಕೊಡ್ತಾರೆ ಅಂತಾನೇ ನಾವು ತಿಳಿದಿದ್ದೆವು. ಆದರೆ ಕೊನೆಯ ಪ್ರಯತ್ನವೆಂಬಂತೆ 4 ದಿನ ಬಿಟ್ಟುಬಂದು ಪುನಃ ನಾವು ಕೇಳಿದಾಗ, ನಮಗೆ ನಮ್ಮ ಚಿನ್ನದ ಸರ ಸಿಕ್ಕಿದೆ. ನಿಜಕ್ಕೂ ತುಂಬ ಖುಷಿಯ ವಿಚಾರ ಎಂದಿದ್ದಾರೆ.
ಅಲ್ಲದೇ, ಪಾಕ ಕೇಂದ್ರ ಹೊಟೇಲ್ ಸಿಬ್ಬಂದಿಗಳ ಮನಸ್ಸು ಎಷ್ಟು ಶುದ್ಧವೋ, ಅಷ್ಟೇ ಇಲ್ಲಿನ ಕಾಫಿ ತಿಂಡಿ ಕೂಡ ರುಚಿಯಾಗಿದ್ದು, ಸಕಲೇಶಪುರಕ್ಕೆ ಬರುವವರು, ಪಾಕ ಕೇಂದ್ರ ಹೊಟೇಲ್‌ಗೆ ಬಂದು ಕಾಫಿ, ಗೋಳಿಬಜೆ, ಬೋಂಡಾ ಸೂಪ್ ಖಂಡಿತ ಟ್ರೈ ಮಾಡಬೇಕು ಎಂದಿದ್ದಾರೆ.
Discussion about this post