Recipe: ಅವಲಕ್ಕಿ ಚೂಡಾ.. ಉತ್ತರಕರ್ನಾಟಕದ ಜನ ಇದನ್ನ ಚೂಡಾ ಅಂತಾರೆ. ಉತ್ತರ ಕನ್ನಡಿಗರು ಇದನ್ನ ಚೂಡ್ವಾ ಅಂತಾರೆ. ಇನ್ನು ಮರಾಠಿಗರು ಇದನ್ನ ಚಿವ್ಡಾ ಅಂತಾರೆ. ಅವಲಕ್ಕಿಯಿಂದ ಮಾಡುವ ಈ ರೆಸಿಪಿ ಕ್ರಿಸ್ಪಿಯಾಗಿ ಇರುವುದಲ್ಲದೇ, ರುಚಿಕರವೂ ಹೌದು.
ಉತ್ತರಕರ್ನಾಟಕದ ಜನ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಚೂಡಾ ಇದ್ರೆನೇ ಮಜಾ ಅಂತಾರೆ. ಅಲ್ಲದೇ, ಸಂಜೆ ವೇಳೆ ಚಾ ಜೋಡಿ ಚೂಡಾ ಇಲ್ಲಂದ್ರ ಹೆಂಗ್ ಅಂತಾನೂ ಹೇಳ್ತಾರೆ. ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಜೊತೆ ಅವಲಕ್ಕಿ ಅಥವಾ ಚುರ್ಮುರಿ ಚೂಡಾ ಇದ್ರೇನೆ ಕಾರ್ಯಕ್ರಮದ ತಿಂಡಿ ಕಂಪ್ಲೀಟ್ ಇದ್ದಂಗೆ. ಅವಲಕ್ಕಿ ಚೂಡಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ .
Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ
ಚೂಡಾ ಮಾಡಲು ಬೇಕಾಗುವ ಸಾಮಗ್ರಿ: ಒಂದು ಕಪ್ ಅವಲಕ್ಕಿ, ಒಂದು ಕಪ್ ಹುರಿದುಕೊಂಡ ಶೇಂಗಾ ಮತ್ತು ಹುರಿಗಡಲೆ ಮಿಕ್ಸ್, ಹುರಿಯಲು ಅಗತ್ಯವಿದ್ದಷ್ಟು ಎಣ್ಣೆ, 10ರಿಂದ 15 ಎಸಳು ಕರೀಬೇವು, ಉದ್ದಗೆ ಹೆಚ್ಚಿಕೊಂಡ ಎರಡು ಹಸಿಮೆಣಸು, ಖಾರ ಕಡಿಮೆ ಬೇಕಾದಲ್ಲಿ ಒಂದು ಹಸಿಮೆಣಸು ಬಳಸಿ, ಖಾರವೇ ಬೇಡವಾದಲ್ಲಿ ಹಸಿಮೆಣಸಿನ ಬದಲು ಖಾರದ ಪುಡಿ ಬಳಸಿ, 10ರಿಂದ 15 ಎಸಳು ಬೆಳ್ಳುಳ್ಳಿ, ಚಿಟಿಕೆ ಸಕ್ಕರೆಪುಡಿ, ಚಿಟಿಕೆ ಖಾರದ ಪುಡಿ, ಚಿಟಿಕೆ ಅರಿಷಿನ, ಚಿಟಿಕೆ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪಿನ ಮಿಶ್ರಣ.
ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಹುರಿಯಲು ಅಗತ್ಯವಿದ್ದಷ್ಟು ಎಣ್ಣೆ ಹಾಕಿ, ಕರೀಬೇವು, ಹಸಿ ಮೆಣಸಿನ ಕಾಯಿ ಹಾಕಿ ಕೊಂಚ ಹುರಿಯಿರಿ.
ನಂತರ ಬೆಳ್ಳುಳ್ಳಿ ಎಸಳು ಹಾಕಿ ಕೊಂಚ ಕಂದು ಬಣ್ಣ ಬರುವವರೆಗೂ ಹುರಿಯಿರಿ.
ಬೆಳ್ಳುಳ್ಳಿ ಘಮ ಬರಲು ಶುರುವಾದ ಮೇಲೆ ಹುರಿದಿಟ್ಟುಕೊಂಡ ಶೇಂಗಾ, ಹುರಿಗಡಲೆ ಮಿಶ್ರಣ ಸೇರಿಸಿ ಮತ್ತೆ ಕೊಂಚ ಹುರಿಯಿರಿ. ಅಗತ್ಯವಿದ್ದಲ್ಲಿ ಒಣ ಕೊಬ್ಬರಿ ತುರಿ ಸೇರಿಸಿ, ಹುರಿಯಿರಿ.
ಈಗ ಸಕ್ಕರೆಪುಡಿ, ಖಾರದ ಪುಡಿ, ಅರಿಷಿನ, ಜೀರಿಗೆ, ಉಪ್ಪಿನ ಮಿಶ್ರಣ ಹಾಕಿ ಕೊಂಚ ಹುರಿದು ಅವಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಹುರಿದರೆ ಅವಲಕ್ಕಿ ಚಿವ್ಡಾ ರೆಡಿ.
ಪಿಕ್‌ನಿಕ್ ಹೋಗುವಾಗ, ಸಂಜೆ ಟೀ ಟೈಮಲ್ಲಿ ಥಟ್ ಅಂತಾ ಸ್ನ್ಯಾಕ್ಸ್ ರೆಡಿ ಮಾಡ್ಬೇಕು ಅನ್ನಿಸಿದಾಗ, ಅಥವಾ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಕರುಂ ಕುರುಂ ತಿಂಡಿ ಬೇಕು ಅನ್ನಿಸಿದಾಗೆಲ್ಲ ಈ ಚಿವ್ಡಾ ಮಾಡಿ ಸವಿಯಿರಿ.
Discussion about this post