ಕನ್ನಡನಾಡಿ ಸುದ್ದಿ ಜಾಲ: ಇಂದು ಸಹೋದರಿಯರು ತಮ್ಮ ಸೋದರರಿಗೆ ಆರೋಗ್ಯ, ಭಾಗ್ಯ ಕೋರಿ ಆರತಿ ಮಾಡಿ ರಕ್ಷಾ ಬಂಧನ (ರಾಖಿ) ಕಟ್ಟುವುದು ಪ್ರತೀತಿ. ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಹುಟ್ಟಿನ ಜೊತೆಗೆ ತಮ್ಮನ್ನು ಸೋದರರಂತೆ ನೋಡಿಕೊಳ್ಳುವ ಯಾರಿಗೇ ಅದರೂ ರಾಖಿ ಹಬ್ಬದ ದಿವಸ ರಾಖಿ ಕಟ್ಟುತ್ತಾರೆ. ಈಗೀಗ ಸೋದರರೂ ತಮ್ಮ ಪ್ರೀತಿಯ ಸೋದರರಿಗೆ ರಾಖಿ ಕಟ್ಡುವುದುಂಟು.
ಸಂಬಂಧಗಳನ್ನು ರಕ್ಷಿಸಿಡುವುದರ ಜೊತೆಗೆ ತಮ್ಮನ್ನು ಕಷ್ಟಗಳಲ್ಲೂ ಸಹ ರಕ್ಷಿಸಬೇಕೆಂಬ ಜವಾಬ್ದಾರಿಯನ್ನು ಸಹ ರಕ್ಷಾ ಬಂಧನ ಹಂಚಿಕೊಳ್ಳುತ್ತದೆ. ರಕ್ಷಾ ಬಂಧನ ಕಟ್ಟಿ ಆರತಿ ಬೆಳಗಿ, ಸಿಹಿ ಹಂಚುವುದು ಬೆಳೆದು ಬಂದ ರೂಢಿ. ಮೊದಲೆಲ್ಲಾ ಸೋದರರು ಯುದ್ದ ಭೂಮಿಗೆ ಹೋದ ಸಂದರ್ಭಗಳಲ್ಲಿ ಸೋದರಿಯರು ಅವರ ಆಯಸ್ಸು, ಆರೋಗ್ಯಕ್ಕಾಗಿ ಪ್ರಾರ್ಥಿಸಿ ರಕ್ಷಾ ಬಂಧನ ಕಟ್ಟುತ್ತಿದ್ದರು.ಈಗೆಲ್ಲಾ ವಯೋಮಾನದ ಹಂಗಿಲ್ಲದೆ ಯಾರು ಯಾರಿಗೆ ಬೇಕಾದರೂ ಸೋದರತೆ ಭಾವದಿಂದ ರಾಖಿ ಕಟ್ಟುವುದನ್ನು ಕಾಣುತ್ತೇವೆ. ಶಾಲಾ ಮಕ್ಕಳಿಗೆ ಇದೊಂದು ಖುಷಿ ಮತ್ತು ಟ್ರೆಂಡ್ ಸಹ ಆಗಿದೆ.
ಬ್ರಹ್ಮಕುಮಾರಿ ಮೊದಲಾದ ಸಂಸ್ಥೆಗಳಲ್ಲಿ ಸಮಾಜದಲ್ಲಿ ಸೋದರತೆ ನೆಲೆಸಲಿ ಎಂಬ ದೃಷ್ಟಿಯಿಂದ ಸಾಮೂಹಿಕವಾಗಿ ರಾಖಿ ಕಟ್ಟುವ ಪ್ರತೀತಿ ಇದೆ. ಇಂಥಹ ಹಲವಾರು ಆಚರಣೆಗಳು ಜಾತಿ, ಮತ, ಧರ್ಮ ಬೇಧವಿಲ್ಲದೆ ಭಾರತ ಬೂಮಿಯ ವಿವಿಧ ಭಾಗಗಳಲ್ಲಿ ಸಂಸ್ಕೃತಿಯ ಅಂಗವಾಗಿ ನಡೆದುಕೊಂಡು ಬಂದಿದೆ.
ಕೆಲವೊಮ್ಮೆ ಅಧಿಕಾರದಲ್ಲಿರುವ ವಿವಿಧ ನಾಯಕರುಗಳು ಶಾಲೆಗಳಲ್ಲಿ ಬೇಟಿ ನೀಡಿ ಮಕ್ಕಳಿಂದ ರಾಖಿ ಕಟ್ಟಿಸಿಕೊಳ್ಳುತ್ತಿದ್ದರು. ಇದೀಗ ಈ ಟ್ರೆಂಡ್ ಕೊರೊನಾ ಹಾವಳಿಯಿಂದ ಇಲ್ಲವಾಗಿದೆ. ರಕ್ಷಾ ಬಂಧನ ಮಧುರ ಬಾಂಧವ್ಯ ಬೆಸೆಯುವುದಕ್ಕೆ ಸಹಕಾರಿ. ರಾಖಿ ಕಟ್ಟಿದವರಿಗೆ ಹಣದ ರೂಪದಲ್ಲಿ ಅಥವಾ ವಸ್ತುಗಳ ರೂಪದಲ್ಲಿ ಉಡುಗೊರೆ ನೀಡುತ್ತಾರೆ. ಸಾಮೂಹಿಕವಾಗಿ ವೀರ ಯೋಧರಿಗೆ ಸಹ ರಾಖಿ ಕಟ್ಡುವುದು ರೂಢಿಯಲ್ಲಿದೆ. ಯೋಧರ ಪ್ರಾಣ ರಕ್ಷಣೆಗಾಗಿ ಹೀಗೆ ಮಾಡುವುದುಂಟು.

























Discussion about this post