ಬೆಂಗಳೂರು: ದಸರಾ ಎಂದರೆ ಗೊಂಬೆ ಮೇಳ. ಕೆಲವರು ತಮ್ಮ ಮನೆಮನೆಗಳಲ್ಲಿ ಭಿನ್ನ ವಿಭಿನ್ನ ಗೊಂಬೆ ತಂದು ಜೋಡಿಸಿ, ಪ್ರತಿ ನಿತ್ಯ ಮಕ್ಕಳಿಗೆ ಕರೆದು ಸಿಹಿತಿಂಡಿ ಕೊಟ್ಟು ಸಂತಸ ಪಡುತ್ತಾರೆ. ಕೆಲವು ಸಂಸ್ಥೆಗಳು ಸಹ ಬೊಂಬೆ ಮೇಳ ಮಾಡಿ ಸಾರ್ವಜನಿಕರಿಗೆ ದಸರಾ ಗೊಂಬೆಗಳನ್ನು ನೋಡಲು ಅವಕಾಶ ಕೊಡುತ್ತವೆ.
ಇದೀಗ ರಾಜದಾನಿಯ ನವರಾತ್ರಿ ಹಾಗೂ ದಸರಾ ಪ್ರಯುಕ್ತ ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಅಕ್ಟೋಬರ್ 8ರಿಂದ 17ರವರೆಗೆ ಗೊಂಬೆಗಳು ಹಾಗೂ ವಿವಿಧ ಆಲಂಕಾರಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ಕರಕುಶಲಕರ್ಮಿಗಳು ಈ ಮೇಳದಲ್ಲಿ ತಮ್ಮ ಕಲಾ ಪ್ರದರ್ಶನ ನಡೆಸುತ್ತಿದ್ದಾರೆ. ಬಗೆಬಗೆಯ ದಸರಾ ಗೊಂಬೆಗಳು ಮೇಳದ ಪ್ರಮುಖ ಆಕರ್ಷಣೆ ಆಗಿದೆ.
ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಗೊಂಬೆಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಖರೀದಿಸಬಹುದಾಗಿದೆ. ತಮ್ಮ ಮನೆಯ ಗೊಂಬೆಗಳ ಕಲೆಕ್ಷನ್ ಗೆ ಇನ್ನಷ್ಟು ಭಿನ್ನ, ವಿಭಿನ್ನ ಬೊಂಬೆಗಳನ್ನು ಖರೀದಿದಿಸಿ ತಂದು ಕೂರಿಸೋ ಅವಕಾಶ ಇಲ್ಲಿದೆ.
ಮೇಳದಲ್ಲಿ 80ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿವೆ.
ದಸರಾ ಗೊಂಬೆಗಳು ಮತ್ತು ಇತರ ಕಲಾಕೃತಿಗಳ ಪ್ರದರ್ಶನಕ್ಕಾಗಿ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಗೆ ಆಸಕ್ತರು ಬೆಳಿಗ್ಗೆ 11ರಿಂದ ಸಂಜೆ 7ವರೆಗೆ ಭೇಟಿ ನೀಡಬಹುದು. ಪ್ರವೇಶ ಉಚಿತ.
Discussion about this post