ಮೈಸೂರು: ಜೆಡಿಎಸ್ ನಿಂದ ದೂರವೇ ಉಳಿದಂತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೊನೆಗೂ ದೇವೆಗೌಡರ ಪಾಳೇಯದಿಂದ ಕಳಚಿಕೊಂಡಿದ್ದಾರೆ.
ಎಚ್. ಡಿ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ ಆಗಂಥಾ ಇನ್ನೂ ಅವಮಾನವನ್ನು ಇಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ಅವರಿಗೆ ಪತ್ರ ಬರೆದು ಆಶೀರ್ವಧಿಸಿ ಎಂದು ಕೇಳಿಕೊಂಡಿರುವುದಾಗಿ ಅವರು ಮೈಸೂರಿನಲ್ಲಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಮಂಗಳವಾರ ಅವರು ಸುದ್ದಿಗಾರರಿಗೆ ಈ ವಿಚಾರ ತಿಳಿಯಪಡಿಸಿ ಮಾತನಾಡಿದರು. ಎಚ್ ಡಿ ಕುಮಾರಸ್ವಾಮಿಯವರು ಸ್ವಲ್ಪ ಸಮಯ ಕೋಪ ಮಾಡಿಕೊಂಡರೂ ಸಹ ಮತ್ತೆ ಸರಿಯಾಗುತ್ತಾರೆ, ಅವರನ್ನು ಸರಿಪಡಿಸಬಹುದು. ಆದರೆ ಸ್ಥಳೀಯವಾಗಿ ಕೆಲವರನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಮತ್ತು ಡಿಕೇಶಿ ಇಬ್ಬರೂ ಪ್ರಭಾವಿ ನಾಯಕರು, ಇಬ್ಬರ ನಡುವೆ ಒಡಕು ಇಲ್ಲ, ಈಗಲೂ ಕಾಂಗ್ರೆಸ್ ಬಲಿಷ್ಟವಾಗಿದೆ ಎಂದು ಕಾಂಗ್ರೆಸ್ ಪರ ನಿಲುವು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ, ಇಲ್ಲಿ ನಾನು ಹಾಲಿ ಶಾಸಕ, ಹೀಗಾಗಿ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ತಮ್ಮ ಪುತ್ರ ಜಿ ಟಿ ಹರೀಶ್ ಗೌಡ ಅವರಿಗೂ ಟಿಕೆಟ್ ಕೇಳಿದ್ದೇನೆ, ಸಿದ್ದರಾಮಯ್ಯನವರು ಹಿರಿಯ ನಾಯಕರೊಂದಿಗೆ ನಮ್ಮ ಪರವಾಗಿ ಚರ್ಚಿಸಿ ತಿಳಿಸುವುದಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಸುದ್ಧಿಗಾರರೊಂದಿಗೆ ಮಾತನಾಡಿದ್ದಾರೆ.
ಜೆಡಿಎಸ್ ಪಾಳೇಯದಿಂದ ಮಧು ಬಂಗಾರಪ್ಪನವರ ನಂತರ ಪಕ್ಷ ಬಿಟ್ಟ ಮತ್ತೊಬ್ಬ ಹಿರಿಯ ಜೆಡಿಎಸ್ ನಾಯಕರು ಇವರಾಗಿದ್ದಾರೆ.

























Discussion about this post