ಕನ್ನಡನಾಡಿ ಸುದ್ದಿ ಜಾಲ: ಉಡುಪಿ: ತಾಲಿಬಾನಿಗಳ ಭಯೋತ್ಪಾದನೆ ಜಗತ್ತಿಗೆ ಎಚ್ಚರಿಕೆ ಗಂಟೆಯಾಗಿದೆ. ಮುಂದೆ ಬೇರೆ ರಾಷ್ಟ್ರಗಳ ನಡುವೆ ವ್ಯಾಪಿಸುವ ಸಾಧ್ಯತೆ ಇದೆ, ಈ ನಿಟ್ಟಿನಲ್ಲಿ ಎಲ್ಲಾ ದೇಶಗಳು ಯೋಚಿಸಬೇಕು ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ತಾಲಿಬಾನಿಗಳ ಭಯೋತ್ಪಾದನೆ ಜಗತ್ತು ತಲೆ ತಗ್ಗಿಸುವಂತೆ ಮಾಡಿದೆ ಎಂದು ಅವರು ಉಡುಪಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ತಾಲಿಬಾನಿಗಳ ಮಾನಸಿಕ ಸ್ಥಿತಿಯನ್ನು ಇದು ಮತ್ತೆ ಮತ್ತೆ ತೋರಿಸುತ್ತಿದೆ, ಮಾನವ ಹಕ್ಕುಗಳಿಗೆ ರಕ್ಷಣೆ ಇಲ್ಲ, ಮಹಿಳೆ- ಮಕ್ಕಳಿಗೆ ಗೌರವವಿಲ್ಲ. ಇದೆಲ್ಲಾ ಅವರ ವಿಚಿತ್ರ ಕಾನೂನು ಹೇರಿಕೆಗಾಗಿ ನ್ಯಾಯವನ್ನು ಗಾಳಿಗೆ ತೂರಿದ್ದಾರೆ.
ಎಲ್ಲಾ ರಾಷ್ಟ್ರಗಳು ಇಂದು ಒಗ್ಗಟ್ಟಾಗಿ ಎದುರಿಸಿ ನಿಲ್ಲಬೇಕು, ಭಾರತ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ. ತಾಲಿಬಾನಿನ ರೀತಿ ನೀತಿಗಳ ಬಗ್ಗೆ ಬಿಜೆಪಿ ಮೊದಲೇ ಎಚ್ಚರಿಸಿತ್ತು, ಈಗ ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ನಮ್ಮ ಯುವಕರನ್ನು ತಾಲಿಬಾನಿ ತರಭೇತಿ ನೀಡುವ ಅಪಾಯ ಹೆಚ್ಚಿದೆ, ಹಲವಾರು ಕಡೆ ಇಂತಹ ಉದಾಹರಣೆಗಳು ನಡೆದಿವೆ. ಬಹಳ ಜಾಗರೂಕರಾಗಿ ಇರಬೇಕಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಗಣೇಶೋತ್ಸವದಂತಹ ಧಾರ್ಮಿಕ ಆಚರಣೆ ಮತ್ತು ಆರೋಗ್ಯದ ಕುರಿತು ಎಚ್ಚರಿಕೆ ಎರಡೂ ಮುಖ್ಯ. ಇನ್ನೊಂದು ವಾರದಲ್ಲಿ ಧಾರ್ಮಿಕ ಆಚರಣೆಗಳಿಗೆ ಹಕ್ಕುಚ್ಯುತಿ ಬಾರದಂತೆ ನಿಯಮಗಳನ್ನು ಸರ್ಕಾರ ರೂಪಿಸಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಕೋವಿಡ್ ಪಾಸಿಟಿವ್ ದರ ಹೆಚ್ಚು ಇರುವ ಕಡೆ ಶಾಲೆ ತೆರೆಯುವುದಿಲ್ಲ, ಉಡುಪಿಯಲ್ಲಿ ಪಾಸಿಟಿವ್ ಹೆಚ್ಚು ಇದೆ. ಕೊರೊನಾ ನಿಯಂತ್ರಿಸುವುದು ಎಲ್ಲರ ಕರ್ತವ್ಯ ಎಂದವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.

























Discussion about this post