ಬೆಳಗಾವಿ :ಬಿಜೆಪಿಯನ್ನು ವಿರೋದಿಸುತ್ತಲೇ ಬರುತ್ತಿರುವ ಸಿದ್ದರಾಮಯ್ಯ ಅವರ ಬಣ ತನ್ನ ತೆಕ್ಕೆಗೆ ಸಾಕಷ್ಟು ಹುರಿಯಾಳುಗಳನ್ನ ಬಿಜೆಪಿಯಿಂದಲೇ ತರುವುದಾಗಿ ಇದಾಗಲೇ ತೊಡೆ ತಟ್ಟಿರುವ ಬೆನ್ನಲ್ಲೇ, ಬಿಜೆಪಿ ಪಕ್ಷದಿಂದ ೪೦ ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅತಣಿಯ ಮದಭಾವಿ ಗ್ರಾಮದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬೆಲೆ ಏರಿಕೆಯಿಂದಾಗಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ದಿನೇ ದಿನೇ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗುತ್ತಿದೆ. ಜನರಿಗೆ ಬಿಜೆಪಿ ಪಕ್ಷದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂವರು ಪ್ರಭಾವಿ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದಾಗಿಯೇ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಜಿಲ್ಲೆಯ ಮೂವರು ಶಾಸಕರ ಜೊತೆಗೆ ಬಿಜೆಪಿಯಿಂದ ಇನ್ನೂ ನಲವತ್ತು ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸಚಿವ ಕುರುಗೇಶ್ ನಿರಾಣಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ಸಂಚಿಸಿದ್ದರು ಎಂಬುದು ಸಹ ಎಲ್ಲರ ಗಮನಕ್ಕೆ ಬಂದಿದೆ.
ಇದರ ಜೊತೆಗೆ ಅವರು ಪ್ರತ್ಯೇಕವಾಗಿ ಸಭೆ ನಡೆಸಿದ್ದರು. ಇದೀಗ ಕಾಂಗ್ರೆಸ್ ನಾಯಕ ಸಿಡಿಸಿರುವ ಹೊಸ ಬಾಂಬ್ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಬಹುದು ಎಂದು ಊಹಿಸಲಾಗಿದೆ.

























Discussion about this post