ಮಂಗಳೂರು (ಮಲ್ಪೆ): ಮೀನುಗಾರಿಕೆ ನಡೆಸುತ್ತಿದ್ದ ಬೋಟಿನ ಬಲೆಗೆ ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಬಹಳ ಅಪರೂಪದ ಮೀನು (೮೪ ಕೆ.ಜಿ.)ಸಿಕ್ಕಿದೆ. ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿರುವ ಸಮುದ್ರ ದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ, ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಗಿಟಾರ್ ಶಾರ್ಕ್ ಮೀನು ಬಿದ್ದಿದೆ.
ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಕೇರಳದಲ್ಲಿ ಈ ಮೀನಿಗೆ ಬೇಡಿಕೆ ಇರುವುದರಿಂದ ಈ ಮೀನನ್ನು ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ರವಾನೆ ಮಾಡಲಾಯಿತು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
‘ಅತ್ಯಂತ ಅಪರೂಪವಾಗಿರುವ ಈ ಮೀನು ಅಳಿವಿನಂಚಿನಲ್ಲಿರುವ ಪ್ರಬೇಧಕ್ಕೆ ಸೇರಿದೆ. ಸಮುದ್ರದಲ್ಲಿ ಎಲ್ಲ ಕಡೆ ಹರಡುಕೊಂಡಿರುವ ಈ ಮೀನು ಮೀನುಗಾರರ ಬಲೆಗೆ ಸಿಗುವುದು ಅಪರೂಪ. ಹವಳ ಬಂಡೆಗಳ ಮಧ್ಯೆ ಇವು ವಾಸಿಸುತ್ತದೆ. 90 ಮೀಟರ್ ಆಳದವರೆಗಿನ ಸಮುದ್ರದಲ್ಲಿ ಇದು ಬದುಕುತ್ತದೆ. ಕೆಲವೊಂದು ಬಾರಿ ತೀರಕ್ಕೂ ಬರುತ್ತದೆ. 2.5 ಮೀಟರ್ಗೂ ಅಧಿಕ ಉದ್ದ ಇರುತ್ತದೆ.
ಸುಮಾರು 135 ಕೆ.ಜಿ.ವರೆಗೆ ತೂಗುತ್ತದೆ. ಈ ಮೀನನ್ನು ಭಾರತದಲ್ಲಿ ತಿನ್ನುತ್ತಾರೆ’ ಎಂದು ಕಾರವಾರ ಕರ್ನಾಟಕ ವಿವಿ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

























Discussion about this post