- ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸೇರಿ ನಾಲ್ವರು ಬಂಧನ
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗ ಕೊಲೆ ಬೆದರಿಕೆ ಒಡ್ಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರನನ್ನು ಮಂಗಳೂರಿನ ಪೊಲೀಸರು ರವಿವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸಹಿತ ಇನ್ನೂ ಮೂವರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಘಟನೆ ವಿವರ: ನಗರದ ಬಳ್ಳಾಲ್ ಬಾಗ್ ಪತ್ತುಮುಡಿ ಸೌಧದಲ್ಲಿ ಶನಿವಾರ ಬೆಳಗ್ಗೆ ೧೧ ಗಂಟೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸೇರಿದಂತೆ ಹಲವರು ಸುದ್ದಿಗೋಷ್ಠಿ ನಡೆಸಿದ ವೇಳೆ, ಮೈಸೂರು ನಂಜನಗೂಡಿನ ದೇವಸ್ಥಾನ ಧ್ವಂಸ ಪ್ರಕರಣ ಹಿನ್ನೇಲೆಯಾಗಿ ಇಟ್ಟುಕೊಂಡು ’ಹಿಂದೂಗಳ ಮೇಲಿನ ದಾಳಿಗಾಗಿ ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನೀವೆಲ್ಲಾ ಯಾವ ಲೆಕ್ಕ’ ಎಂಬಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಮುಖ್ಯಮಂತ್ರಿ ಸೇರಿದಂತೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ಹೇಳಿಕೆ ನೀಡಿದ್ದರು. ಇದರ ಕುರಿತು ಡಾ. ಲೋಹಿತ್ ಕುಮಾರ್ ಸುವರ್ಣ ದೂರು ನೀಡಿದ್ದ ಹಿನ್ನೇಲೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ವಿವಿಧ IPC ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಸಂಘಟನೆಯ ಹೆಸರು ದುರುಪಯೋಗ ಮಾಡಿದ ಆರೋಪವೂ ಸಹ ಸೇರಿಕೊಂಡಿದೆ ಎಂದು ಹೇಳಲಾಗಿದೆ.
ಪ್ರಚೋದನಾಕಾರಿ ಹೇಳಿಕೆಗಳು ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ಮಹಾಲಕ್ಷ್ಮೀ ಲೇ ಔಟ್ ನ ಡಾ. ಲೋಹಿತ್ ಕುಮಾರ್ ಸುವರ್ಣ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಮೂವರನ್ನು ಅರೆಸ್ಟ್ ಮಾಡಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೨೦-ಬಿ (ಪಿತೂರಿ), ೧೫೩-ಎ, (ಧರ್ಮಗಳ ನಡುವೆ ವೈರತ್ವ ಉತ್ತೇಜನ), ೫೦೫-೨ (ಕಿಡಿಗೇಡಿತನ), ೫೦೬ (ಕೊಲೆ ಬೆದರಿಕೆ), ೪೬೫ (ಫೋರ್ಜರಿ), ೪೬೮ (ಮೋಸದ ಉದ್ದೇಶಕ್ಕಾಗಿ ನಕಲು), (ಗಣ್ಯರ ಅಪ್ರತಿಷ್ಠೆಗೆ ಚ್ಯುತಿ), ೧೪೯ (ಕಾನೂನುಬಾಹಿರ ಚಟುವಟಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಇದರ ಬೆನ್ನಲ್ಲೇ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಸಹ ಪೊಲೀಸರ ಅತಿಥಿಯಾಗಿದ್ದಾರೆ.
ಧರ್ಮೇಂದ್ರ ನೀಡಿದ ಹೇಳಿಕೆ ನಾನು ಬೆಂಬಲಿಸುವೆ, ಅವರ ಸಹಿತ ಬಿಜೆಪಿ ಪ್ರಕರಣ ದಾಖಲಿಸಿರುವುದು ಖಂಡನೀಯ, ಸುದ್ದಿಗೋಷ್ಠಿಯಲ್ಲಿ ಇರದ ನನ್ನ ಮೇಲೂ ಪ್ರಕರಣ ದಾಖಲಿಯಾಗಿದೆ ಎಂದು ರಾಜೇಶ್ ಪವಿತ್ರನ್ ರವಿವಾರ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಾಜೇಶ್ ಪವಿತ್ರನ್ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ.

























Discussion about this post